

ರೋಣ: ಪುರಸಭೆ ವ್ಯಾಪ್ತಿಗೊಳಪಡುವ ಹಲವು ಮಳಿಗೆಗಳ ಬಾಡಿಗೆ ಹಣ ಹಲವು ವರ್ಷಗಳಿಂದ ವಸೂಲಿಯಾಗಿಲ್ಲ, ಲಕ್ಷಾಂತರ ರೂ. ಬಾಕಿ ಇದ್ದು, ಅದನ್ನು ವಸೂಲಿ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದಿರಿ ಎಂದು ಪುರಸಭೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬುಧವಾರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.
10ರಿಂದ 15 ವರ್ಷಗಳ ಹಿಂದಿನಿಂದ ಪುರಸಭೆ ಮಳಿಗೆಯಲ್ಲಿರುವ ಬಾಡಿಗೆದಾರರು ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದನ್ನು ವಸೂಲಿ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಏಕೆ? ಇದರಿಂದಾಗಿ ಪುರಸಭೆಗೆ ಬರಬೇಕಾಗಿರುವ ಆದಾಯ ಕಡಿಮೆಯಾಗುತ್ತಿದೆ. ಕೂಡಲೇ ಬಾಡಿಗೆ ಬಾಕಿ ಇಟ್ಟುಕೊಂಡಿರುವ ಎಲ್ಲರಿಗೂ ನೋಟಿಸ್ ನೀಡಿ ವಸೂಲಿ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ರಮೇಶ ಹೊಸಮನಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ 1ನೇ ವಾರ್ಡ್ನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ದಿನ ಕಳೆದಿದ್ದು, ಅದನ್ನು ದುರಸ್ತಿ ಮಾಡಿಲ್ಲ. ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಅದನ್ನು ಸರಿಪಡಿಸದೇ ಹೊಸದಾಗಿ ಬಹಿರಂಗ ಲಿಲಾವು ಮಾಡುತ್ತಿದ್ದಿರಿ. ಅದನ್ನು ಸರಿಪಡಿಸಿದ ನಂತರ ಶುದ್ಧ ಕುಡಿಯುವ ನೀರಿನ ಘಟಕದ ಬಹಿರಂಗ ಲಿಲಾವು ಕರೆಯಿರಿ ಎಂದು ಸದಸ್ಯ ಮಲ್ಲಯ್ಯ ಮಹಾಪುರಷಮಠ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಶುದ್ಧ ಕುಡಿಯುವ ನೀರಿನ ಘಟಕದ ಬಾಕಿ ಇರುವ ಎಲ್ಲ ಹಣವನ್ನು ವಸೂಲಿ ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಹೊಸಮನಿ ತಿಳಿಸಿದರು.
ಸದಸ್ಯರ ಮಾತಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ನಮ್ಮ ವಾರ್ಡ್ನಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಲವು ಬಾರಿ ಅಧಿಕಾರಿಗಳಿಗೆ ಹೇಳಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಜನರು ಉತಾರ ಪಡೆಯಲು ಬಂದರೆ ಅಧಿಕಾರಿಗಳು ಅವರ ಬಳಿ 500 ರೂ. ಪಡೆದುಕೊಂಡು ಉತಾರ ಕೊಡುತ್ತಿದ್ದೀರಿ ಎಂದು ಸದಸ್ಯ ವಿಜಯ ಗಡಗಿ ಆರೋಪಿಸಿದರು.
ಪುರಸಭೆಯಲ್ಲಿ 25ಕ್ಕೂ ಹೆಚ್ಚುವರಿ ಪೌರ ಕಾರ್ವಿುಕರು ಹಾಗೂ ವಾಹನ ಚಾಲಕರ ಅವಶ್ಯಕತೆ ಇದೆ. ಠರಾವು ಪಾಸ್ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸೋಣ ಎಂದು ಸದಸ್ಯ ಸಂಗಪ್ಪ ಜಿಡ್ಡಿಬಾಗಿಲಿ ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಒಮ್ಮತ ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯರಾದ ಮಿಥುನ ಪಾಟೀಲ, ಬಾವಾಸಾಬ ಬೇಟಗೇರಿ, ದಾವಲಸಾಬ ಬಾಡಿನ, ವಿದ್ಯಾ ದೊಡ್ಡಮನಿ, ವಿಜಯಲಕ್ಷ್ಮಿ ಕೊಟಗಿ, ಪುರಸಭೆ ಸಿಬ್ಬಂದಿ ಹನುಮಂತ ಬಳ್ಳಾರಿ, ವೀರೇಶ ಹೆಬ್ಬಳ್ಳಿ, ರಾಜು ಮಾಡಲಗೇರಿ ಇದ್ದರು.