ಫಸಲಿನ ವಿವರ ದಾಖಲಿಸಿ, ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

TRAINING
ಮುಂಡರಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ತಹಸೀಲ್ದಾರ್ ಧನಂಜಯ ಎಂ. ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ತರಬೇತಿ ಸಭೆ ಜರುಗಿತು. ಸ್ಫೂರ್ತಿ ಜಿ.ಎಸ್, ಪ್ರಮೋದ ತುಂಬಳ ಇತರರಿದ್ದರು.
Published on

ಮುಂಡರಗಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ತಹಸೀಲ್ದಾರ್ ಧನಂಜಯ ಎಂ. ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ತರಬೇತಿ ಸಭೆ ಜರುಗಿತು.

ಗದಗ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿ, ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ 2024-25ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದೆ.

ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಗೂಗಲ್ ಪ್ಲೇ ಸ್ಟೋರ್‌ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2024 ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರಗಳವನ್ನು ದಾಖಲಿಸಬೇಕು. ಬೆಳೆ ವಿವರಗಳನ್ನು ದಾಖಲಿಸುವುದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆ ಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗಲಿದೆ.

ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ರೈತರು ಬೆಳೆ ವಿವರಗಳನ್ನು ಅಪ್ಲೋಡ್ ಮಾಡದಿದ್ದಲ್ಲಿ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದರು.

ತಹಸೀಲ್ದಾರ್ ಧನಂಜಯ ಎಂ. ಮಾತನಾಡಿ, ರೈತರು ಮಾಡಿದ ಬೆಳೆ ಸಮೀಕ್ಷೆಯನ್ನು ಮೇಲ್ವಿಚಾರಕರು ಪರಿಶೀಲಿಸಿ ಅನುಮೋದಿಸಬೇಕು. ತಪ್ಪಿದಲ್ಲಿ ಮೇಲ್ವಿಚಾರಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ತಾಲೂಕಿನ 53 ಗ್ರಾಮಗಳಲ್ಲಿ 61 ಖಾಸಗಿ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಿಕೊಂಡಿದ್ದು ರೈತರು ಬೆಳೆ ವಿವರಗಳನ್ನು ದಾಖಲಿಸಲು ಖಾಸಗಿ ನಿವಾಸಿಗಳ ಸಹಾಯ ಪಡೆದು ತಮ್ಮ ಬೆಳೆ ವಿವರ ದಾಖಲಿಸಬೇಕು. ಖಾಸಗಿ ಬೆಳೆ ಸಮೀಕ್ಷೆದಾರರು ಬೆಳೆ ಸಮೀಕ್ಷೆ ಮಾಡುವಲ್ಲಿ ರೈತರು ಬೆಳೆದ ಬೆಳೆಯನ್ನು ಕಡ್ಡಾಯವಾಗಿ ನಮೋದಿಸಬೇಕು ಹಾಗೂ ರೈತರಿಗೆ ಬೆಳೆ ಸಮಿಕ್ಷೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net