ರೆಕಾರ್ಡ್ ರೂಂ ಸಿಬ್ಬಂದಿ ಲಂಚಕ್ಕೆ ಬೇಡಿಕೆ

30byd1
Published on

ಬ್ಯಾಡಗಿ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಅಭಿಲೇಖಾಲಯ (ರೆಕಾರ್ಡ್ ರೂಂ) ಸಿಬ್ಬಂದಿ ದಾಖಲೆ ಪ್ರತಿಗಳನ್ನು ಒದಗಿಸಲು ಲಂಚ ಕೇಳುತ್ತಿದ್ದಾರೆ. ಹಣ ನೀಡದಿದ್ದಲ್ಲಿ ದಾಖಲಾತಿ ನೀಡದೇ ವಿನಾಕಾರಣ ಅಲೆದಾಡಿಸುತ್ತಾರೆ ಎಂದು ನೊಂದ ಮಹಿಳೆಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿ ಬಿ.ಆರ್. ಗೋಪಿ ಅವರಿಗೆ ದೂರು ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ದೂರು ನೀಡಿದ ನೆಹರು ನಗರ ಎಡಭಾಗದ ಕಾಲನಿ ವಾಸಿ ಫಿರಾಂಬಿ ದೇಸೂರು, ನೂರಾರು ವರ್ಷದಿಂದ ವಾಸವಿರುವ ಜಾಗಕ್ಕೆ ಸಂಬಂಧಿಸಿದ ವಿವಿಧ ದಾಖಲಾತಿ ಕೇಳಿದ್ದಾರೆ. ಆದರೆ, ಅಭಿಲೇಖಾಲಯ ಸಿಬ್ಬಂದಿ ಆರೇಳು ತಿಂಗಳ ಬಳಿಕ ಹಿಂಬರಹ ನೀಡಿದ್ದಾರೆ. ನಾನು ಒಂದು ರೂಪಾಯಿ ಲಂಚ ನೀಡಲ್ಲ, ನಿಗದಿಪಡಿಸಿದ ಹಣ ತೆಗೆದುಕೊಳ್ಳಿ ಎಂದರೆ, ಸರಿಯಾದ ಸಮಯಕ್ಕೆ ದಾಖಲೆ ನೀಡಲ್ಲ. ಲಂಚ ಕೊಟ್ಟಲ್ಲಿ ಸಬೂಬು ಹೇಳದೆ ದಾಖಲೆ ನೀಡುತ್ತಾರೆ. ಈ ಕೊಠಡಿಯಲ್ಲಿ ನೇಮಿಸಿದ ಸಿಬ್ಬಂದಿ ಜತೆಗೆ ಖಾಸಗಿಯವರು ದಂಧೆ ಮಾಡಿಕೊಂಡಿದ್ದು, ಸಾಕಷ್ಟು ಏಜೆಂಟರು ಹುಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.

ಲಂಚ ಪಡೆದರೆ ಜೈಲೇ ಗತಿ: ಕಂದಾಯ, ಕೃಷಿ, ಗ್ರಾಮ ಪಂಚಾಯಿತಿ, ನೋಂದಣಿ ಕಚೇರಿ, ತಾಪಂ ಸೇರಿ ಕೆಲ ಪ್ರಮುಖ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸಕಾಲಕ್ಕೆ ಕೆಲಸ ಮಾಡಿಕೊಡುತ್ತಿಲ್ಲ. ಹಣ ಕೊಡದಿದ್ದಲ್ಲಿ ಕಚೇರಿಗಳಿಗೆ ಅಲೆದಾಡಿಸುತ್ತಾರೆ ಎಂಬ ದೂರುಗಳಿವೆ. ಸರ್ಕಾರಿ ನೌಕರರು ಲಂಚ ಪಡೆದಿರುವುದು ಸಾಬೀತಾದರೆ ಜೈಲೇ ಗತಿ. ಯಾರಾದರೂ ಲಂಚ ಕೇಳಿದಲ್ಲಿ ಸಾರ್ವಜನಿಕರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳನ್ನು ಸಂರ್ಪಸಬೇಕು ಎಂದು ಅಧಿಕಾರಿ ಬಿ.ಆರ್. ಗೋಪಿ ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಹಾಗೂ ಉಚಿತ ಸೌಲಭ್ಯಗಳಿದ್ದರೂ, ಸೇವೆ ಲಭ್ಯವಾಗುತ್ತಿಲ್ಲ ಎಂದು ಕೆಲ ಸಾರ್ವಜನಿಕರು ದೂರು ನೀಡಿದ್ದು, ತಾಲೂಕು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ತಾಲೂಕಿನ ಕಾಗಿನೆಲೆ ಗ್ರಾಮಸ್ಥರು 20 ವರ್ಷಗಳಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೂ, ನ್ಯಾಯ ದೊರಕದ ಕುರಿತು 480 ಜನರ ದೂರಿದ್ದು, ತನಿಖೆ ಮಾಡಲಾಗುವುದು ಎಂದರು.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಬ್ಬಂದಿ ಕೊಡಿ: ಭ್ರಷ್ಟಾಚಾರ ನಿಮೂಲನೆ ಸಮಿತಿ ನ್ಯಾಸ್ ಜಿಲ್ಲಾಧ್ಯಕ್ಷ ವಿ.ಆರ್. ತೋಟದ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಲೋಕಾಯುಕ್ತ ಕಚೇರಿ, ಸಿಬ್ಬಂದಿ ಹಲ್ಲಿಲ್ಲದ ಹಾವಿನಂತಾಗಿದೆ. ಇವರಿಗೆ ವೇತನ, ವಾಹನ ಇತರ ಸೌಲಭ್ಯ ನೀಡಿದರೂ ಪ್ರಯೋಜನವಿಲ್ಲ. ಈಗ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಕೇವಲ 5 ಜನ ಸಿಬ್ಬಂದಿಯಿದ್ದು, ಕನಿಷ್ಠ 20 ಸಿಬ್ಬಂದಿ ನೇಮಿಸಿದಲ್ಲಿ ಸೇವೆಗೆ ಅನುಕೂಲವಾಗಲಿದೆ ಎಂದರು.

ಪೊಲೀಸ್ ಸಿಬ್ಬಂದಿ ಪ್ರಭಾವತಿ ಶೇಖಸನದಿ, ಎನ್. ವೆಂಕಟೇಶ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ಎಸ್.ಪಿ. ಜಾಧವ, ಹನುಮವ್ವ ದೇವಗಿರಿ, ಪರೀದಾಭಾನು ನದಿಮುಲ್ಲಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net