ಮೈಸೂರಿನಲ್ಲಿ ದಾಖಲೆಯ ಮಳೆ, ರಾಜ್ಯದಲ್ಲಿಯೇ ಅತಿಹೆಚ್ಚು


ಪಿರಿಯಾಪಟ್ಟಣ ತಾಲೂಕಿನ ಹಿಟ್ಟನೇಹೆಬ್ಬಾಗಿಲು ಗ್ರಾಮದ ಕೆರೆ ಕೋಡಿ ಬಿದ್ದಿದೆ.
ಪಿರಿಯಾಪಟ್ಟಣ ತಾಲೂಕಿನ ಹಿಟ್ಟನೇಹೆಬ್ಬಾಗಿಲು ಗ್ರಾಮದ ಕೆರೆ ಕೋಡಿ ಬಿದ್ದಿದೆ.
Published on: 

ಮೈಸೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಶುಕ್ರವಾರ ರಾತ್ರಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಪುನಾಡಹಳ್ಳಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು, ಬರೋಬ್ಬರಿ 139 ಮಿ.ಮೀ. ಮಳೆ ದಾಖಲಾಗಿದೆ.

ಪುನಾಡಹಳ್ಳಿಯಲ್ಲಿ ದಾಖಲಾದ ಮಳೆಯ ಪ್ರಮಾಣ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ನೆಲ್ಲಿಕರು ಗ್ರಾಮದಲ್ಲಿ 135.5 ಮಿ.ಮೀ. ಮಳೆಯಾಗಿದ್ದು, ಎರಡನೇ ಸ್ಥಾನದಲ್ಲಿದೆ. ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮದಲ್ಲಿ 134 ಮಿ.ಮೀ. ಮಳೆ ಸುರಿದಿದ್ದು, ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರ ರಾತ್ರಿ ಮಳೆ ಮತ್ತಷ್ಟು ಬಿರುಸು ಪಡೆದಿತ್ತು. ರಾತ್ರಿ ಪೂರ್ತಿ ಭಾರಿ ಮಳೆ ಸುರಿದು ಇಳೆಯನ್ನು ತಂಪಾಗಿಸಿದೆ. ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ತಂಪಿನ ಅನುಭವ ಆಗುತ್ತಿದೆ. ಶನಿವಾರವೂ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂತು.

ಹಲವು ತಾಲೂಕುಗಳಲ್ಲಿ ಮಳೆ ಅಬ್ಬರ:

ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಸಾಲಿಗ್ರಾಮ, ಕೆ.ಆರ್. ನಗರ ಹಾಗೂ ಎಚ್.ಡಿ. ಕೋಟೆ ತಾಲೂಕುಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಉಳಿದ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿರುವ ವರದಿಯಾಗಿದೆ. ನಿರಂತರ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆಯೂ ಮಳೆಯ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದರೂ, ಜನಜೀವನದ ಮೇಲೆ ಯಾವುದೇ ದೊಡ್ಡ ಮಟ್ಟದ ಪರಿಣಾಮ ಉಂಟಾದ ಬಗ್ಗೆ ವರದಿಯಾಗಿಲ್ಲ.

ಅ.25ರಂದು ಭಾರಿ ಮಳೆ ಸಾಧ್ಯತೆ:

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅ.25ರಂದು ಮೈಸೂರು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ನಂತರದ ದಿನಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗುವ ನಿರೀಕ್ಷೆಯಿದೆ. ಸದ್ಯ ಜಿಲ್ಲೆಯಲ್ಲಿ ಮುಂದುವರಿದಿರುವ ಮಳೆಯ ವಾತಾವರಣದಿಂದ ತಾಪಮಾನದಲ್ಲಿ ಇಳಿಕೆಯಾಗಿದ್ದು, ತಂಪಾದ ವಾತಾವರಣ ನೆಲೆಸಿದೆ.

ಎಲ್ಲಿ, ಎಷ್ಟು ಮಳೆ?:

ಕಳೆದ 24 ಗಂಟೆಗಳ ಅವಧಿಯಲ್ಲಿ ಪಿರಿಯಾಪಟ್ಟಣ, ಸಾಲಿಗ್ರಾಮ, ಎಚ್.ಡಿ. ಕೋಟೆ, ಕೆ.ಆರ್. ನಗರ ಹಾಗೂ ಹಣಸೂರು ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಪಿರಿಯಾಪಟ್ಟಣದ ಆವರ್ತಿಯಲ್ಲಿ 105.2 ಮಿ.ಮೀ., ಕೊಪ್ಪದಲ್ಲಿ 97 ಮಿ.ಮೀ., ನವಿಲೂರಿನಲ್ಲಿ 96.2 ಮಿ.ಮೀ., ಸಾಲಿಗ್ರಾಮದ ಕೆಸ್ತೂರಿನಲ್ಲಿ 95.5 ಮಿ.ಮೀ., ಪಿರಿಯಾಪಟ್ಟಣದ ಚನ್ನಕಲ್ ಕಾವಲ್‌ನಲ್ಲಿ 93.5 ಮಿ.ಮೀ., ಸಾಲಿಗ್ರಾಮದ ಚುಂಚನಕಟ್ಟೆಯಲ್ಲಿ 88.5 ಮಿ.ಮೀ., ಪಿರಿಯಾಪಟ್ಟಣದ ಹಲಗನಹಳ್ಳಿಯಲ್ಲಿ 88 ಮಿ.ಮೀ., ಸಾಲಿಗ್ರಾಮದ ಕುಪ್ಪೆಹಂತದಲ್ಲಿ 83 ಮಿ.ಮೀ., ಎಚ್.ಡಿ.ಕೋಟೆಯ ಹಿರೇಹಳ್ಳಿಯಲ್ಲಿ 82.5 ಮಿ.ಮೀ., ಹೊಸಹೊಳಲುವಿನಲ್ಲಿ 79 ಮಿ.ಮೀ., ಸಾಲಿಗ್ರಾಮದ ಮಾಯಿಗೌಡನಹಳ್ಳಿಯಲ್ಲಿ 775. ಮಿ.ಮೀ., ಎಚ್.ಡಿ. ಕೋಟೆಯ ಡಿ.ಬಿ.ಕುಪ್ಪೆಯಲ್ಲಿ 75.5 ಮಿ.ಮೀ., ಪಿರಿಯಾಪಟ್ಟಣದ ಮತ್ತೂರಿನಲ್ಲಿ 75 ಮಿ.ಮೀ. ಮಳೆಯಾಗಿದೆ.

ಪಿರಿಯಾಪಟ್ಟಣದ ಚಿಕ್ಕನೇರಳೆಯಲ್ಲಿ 73 ಮಿ.ಮೀ., ಕೆ.ಆರ್. ನಗರದ ಸಿದ್ದಾಪುರದಲ್ಲಿ 71.5 ಮಿ.ಮೀ., ಎಚ್.ಡಿ. ಕೋಟೆಯ ನೂರಲಕುಪ್ಪೆಯಲ್ಲಿ 66 ಮಿ.ಮೀ., ಪಿರಿಯಾಪಟ್ಟಣದ ಕಿರ‌್ನಲ್ಲಿಯಲ್ಲಿ 64.2 ಮಿ.ಮೀ., ಎಚ್.ಡಿ. ಕೋಟೆಯ ಎನ್. ಬೆಳ್ತೂರುವಿನಲ್ಲಿ 64 ಮಿ.ಮೀ., ಪಿರಿಯಾಪಟ್ಟಣದ ಚಪ್ಪರದಹಳ್ಳಿಯಲ್ಲಿ 63.7 ಮಿ.ಮೀ., ಹುಣಸೂರಿನ ಬಿಳಿಕೆರೆಯಲ್ಲಿ 63.5 ಮಿ.ಮೀ., ಚಿಕ್ಕಬೀಚನಹಳ್ಳಿಯಲ್ಲಿ 62.2 ಮಿ.ಮೀ., ಪಿರಿಯಾಪಟ್ಟಣದ ಅತ್ತಿಗೋಡಿನಲ್ಲಿ 61 ಮಿ.ಮೀ., ಎಚ್.ಡಿ. ಕೋಟೆಯ ನಾಗನಹಳ್ಳಿಯಲ್ಲಿ 60.5 ಮಿ.ಮೀ., ಸಾಲಿಗ್ರಾಮದ ಹೊನ್ನೇಹಳ್ಳಿಯಲ್ಲಿ 60.5 ಮಿ.ಮೀ., ಎಚ್.ಡಿ.ಕೋಟೆಯ ಹೆಬ್ಬಲಕುಪ್ಪೆಯಲ್ಲಿ 59 ಮಿ.ಮೀ., ಪಿರಿಯಾಪಟ್ಟಣದ ಚೌತಿಯಲ್ಲಿ 58.7 ಮಿ.ಮೀ. ಮಳೆ ಸುರಿದಿದೆ.

ಹುಣಸೂರಿನ ಉಯ್ಯಿಗೌಡನಹಳ್ಳಿಯಲ್ಲಿ 58.5 ಮಿ.ಮೀ., ಪಿರಿಯಾಪಟ್ಟಣದ ಬೆಟ್ಟದತುಂಗದಲ್ಲಿ 57.75 ಮಿ.ಮೀ., ಹುಣಸೂರಿನ ಚಿಲ್ಕುಂದಲ್ಲಿ 57.5 ಮಿ.ಮೀ., ಸಾಲಿಗ್ರಾಮ ತಾಲೂಕಿನ ಸಾಲಿಗ್ರಾಮ ಪಟ್ಟಣದಲ್ಲಿ 56 ಮಿ.ಮೀ., ಪಿರಿಯಾಪಟ್ಟಣದ ಕಿತ್ತೂರಿನಲ್ಲಿ 55.5 ಮಿ.ಮೀ., ಸಾಲಿಗ್ರಾಮದ ನರಚಹಳ್ಳಿಯಲ್ಲಿ 55.5 ಮಿ.ಮೀ., ಪಿರಿಯಾಪಟ್ಟಣದ ದೊಡ್ಡಕಮರವಳ್ಳಿಯಲ್ಲಿ 55 ಮಿ.ಮೀ., ಹುಣಸುರಿನ ಬಿಳಿಗೆರೆಯಲ್ಲಿ 52 ಮಿ.ಮೀ., ಉದ್ಬೂರುಕಾವಲಿನಲ್ಲಿ 51.5 ಮಿ.ಮೀ., ಸಾಲಿಗ್ರಾಮದ ಅಂಕನಹಳ್ಳಿಯಲ್ಲಿ 51 ಮಿ.ಮೀ., ಪಿರಿಯಾಪಟ್ಟಣದ ಎನ್. ಶೆಟ್ಟಿಯಲ್ಲಿ 50.7 ಮಿ.ಮೀ., ಎಚ್.ಡಿ. ಕೋಟೆಯ ಪಡುಕೋಟೆಕಾವಲ್‌ನಲ್ಲಿ 50.5 ಮಿ.ಮೀ., ಸಾಲಿಗ್ರಾಮದ ಗಂಧನಹಳ್ಳಿಯಲ್ಲಿ 50.5 ಮಿ.ಮೀ., ಎಚ್.ಡಿ.ಕೋಟೆ ಪಟ್ಟಣದಲ್ಲಿ 50 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net