

ಹಿರಿಯೂರು: ವರುಣ ಕೃಪೆಯಿಂದ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ದಾಖಲೆ ಪ್ರಮಾಣದ ನೀರು ಹರಿದು ಬರುತ್ತಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಒಂದು ವಾರದಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 121.75 ಅಡಿಗೆ ತಲುಪಿದೆ.
ವೇದಾವತಿ ನದಿಪಾತ್ರದಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣ 2545 ಕ್ಯುಸೆಕ್ ತಲುಪಿದೆ. ಭದ್ರಾ ಜಲಾಶಯದಿಂದ ಜುಲೈ 15 ರಿಂದ ಅ. 15ರ ವರೆಗೆ ನೀರು ಹರಿಸಲು ಸರ್ಕಾರ ಆದೇಶ ಮಾಡಿದ್ದು, ಭದ್ರಾ ನೀರು ಹರಿಯುವ ಮೊದಲೇ ವಿವಿ ಸಾಗರಕ್ಕೆ 1.5 ಟಿಎಂಸಿ ಅಡಿ ನೀರು ಹರಿದು ಬಂದಿರುವುದು ಪ್ರಸಕ್ತ ವರ್ಷದ ದಾಖಲೆಯಾಗಿದೆ.
ಜಲಾಶಯದ ಸಮೀಪದ ಉತ್ತರೆ ಗುಡ್ಡ ಅರಣ್ಯ ಪ್ರದೇಶ ಹಸಿರು ಮೈದುಂಬಿಕೊಂಡು, ಜೀವ ವೈವಿಧ್ಯದಿಂದ ಸಮೃದ್ಧವಾಗಿದೆ. ಬಯಲು ಸೀಮೆಯ ಗರಿಮೆ ಹೆಚ್ಚಿಸಿರುವ ಉತ್ತರೆ ಗುಡ್ಡ ಅರಣ್ಯ ಪ್ರದೇಶಕ್ಕೆ ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯಂತ ರಮಣೀಯ ಸ್ಥಳವಾಗಿದೆ. ಹಸಿರು ಬೆಟ್ಟಗಳು, ಸೊಂಪಾದ ಕಾಡು, ಹಳ್ಳ-ಕೊಳ್ಳ, ಚಿಕ್ಕ ಜಲಪಾತಗಳಿಂದ ಆವೃತ್ತವಾಗಿದೆ. ಅಪರೂಪದ ಸಸ್ಯ, ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳು ವಾಸಸ್ಥಾನವಾಗಿರುವ ಉತ್ತರೆ ಗುಡ್ಡ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿ ಧಾಮ ಎಂದು ಘೋಷಿಸಲಾಗಿದೆ.
ಉತ್ತರೆ ಗುಡ್ಡ ಅರಣ್ಯ ಪ್ರದೇಶದಲ್ಲಿ ಭದ್ರಾ ಅರಣ್ಯ-ಬನ್ನೇರುಘಟ್ಟ ಆನೆಗಳ ಕಾರಿಡಾರ್ ಹಾದು ಹೋಗಿರುವುದು ವಿಶೇಷ. ಪ್ರತಿ ವರ್ಷ ಈ ಭಾಗದಲ್ಲಿ ಆನೆಗಳ ಸಂಚಾರ ಕಂಡುಬರುತ್ತದೆ.
ಜಲ ವೈಭವ ವೀಕ್ಷಣೆ
ಮಾರಿಕಣಿವೆಯ ಹಸಿರು ಪರಿಸರ, ಜಲಾಶಯದ ಸುತ್ತಲಿನ ಉತ್ತರೆ, ಛತ್ರಿಗುಡ್ಡಗಳ ಮೇಲೆ ಮೋಡಗಳ ಮೆರವಣಿಗೆ, ಗಂಟೆಗೆ ನಾಲ್ಕೈದು ಬಾರಿ ಸುರಿಯುವ ಸೋನೆ ಮಳೆ, ಆಹ್ಲಾದಕರ ವಾತಾವರಣ, ಅಣೆಕಟ್ಟಿನ ಜಲವೈಭವ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬರುತ್ತಿದೆ.