

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಿಗೆ ಜನವರಿ ತಿಂಗಳಲ್ಲಿ ದಾಖಲೆಯ ಪ್ರಮಾಣದ ಕಾಣಿಕೆ ಭಕ್ತರಿಂದ ರಾಯರಿಗೆ ಸಲ್ಲಿಕೆಯಾಗಿದ್ದು, ಈ ತಿಂಗಳ ಕಾಣಿಕೆ ಶ್ರೀಮಠದ ಹುಂಡಿಗಳಿಗೆ ಬಂದ ಅತ್ಯಕ ಕಾಣಿಕೆಯಾಗಿದೆ.
ಕಳೆದ ಡಿ.27 ರಿಂದ ಜ.29ರವರೆಗೆ ಒಟ್ಟು 33 ದಿನಗಳಲ್ಲಿ ಭಕ್ತರಿಂದ ಹುಂಡಿಗಳಿಗೆ ವಿವಿಧ ವೌಲ್ಯದ 4.07 ಕೋಟಿ ರೂ. ಹಾಗೂ 8.20 ಲಕ್ಷ ರೂ. ನಾಣ್ಯಗಲು ಸೇರಿದಂತೆ ಒಟ್ಟು 4.15 ಕೋಟಿ ರೂ. ಹಾಗೂ 44 ಗ್ರಾಂ ಬಂಗಾರ, 3,642 ಗ್ರಾಂ ಬೆಳ್ಳಿ ಸಾಮಗ್ರಿಗಳು ಬಂದಿವೆ.
ಸೆಪ್ಟೆಂಬರ್ ತಿಂಗಳಲ್ಲಿ ಹುಂಡಿಗಳಿಗೆ 3.82 ಕೋಟಿ ರೂ. ಕಾಣಿಕೆಯಾಗಿ ಬಂದಿದ್ದು, ಇದುವರೆಗಿನ ಅತ್ಯಕ ಮೊತ್ತವಾಗಿತ್ತು. ಶ್ರೀಮಠದಲ್ಲಿ ಸೋಮವಾರ ಹುಂಡಿಗಳಲ್ಲಿನ ಹಣ ಎಣಿಕೆ ತಡರಾತ್ರಿವರೆಗೆ ಜರುಗಿದೆ. ವರ್ಷಾಂತ್ಯದಲ್ಲಿ ಸಾಲು ಸಾಲು ರಜೆಗಳಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿದ್ದರಿಂದ ಕಾಣಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.