

ದೇವದುರ್ಗ: ಕ್ರಿಕೆಟ್, ಮೊಬೈಲ್, ಫೇಸ್‌ಬುಕ್‌ನಂಥ ಆಧುನಿಕ ತಂತ್ರಜ್ಞಾನದಲ್ಲಿ ಮುಳುಗಿರುವ ಇಂದಿನ ಯುವ ಸಮೂಹದ ಮಧ್ಯೆ ತಾಲೂಕಿನ ವಂದಲಿ ಗ್ರಾಮದ ಯುವ ರೈತರು ಕೇವಲ 6ಗಂಟೆಯಲ್ಲಿ 12ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಕೈಗೊಂಡು ಹೊಸ ಸಾಧನೆ ಮಾಡಿದ್ದಾರೆ.
ಒಂದು ಜೋಡೆತ್ತು ಕೂರಿಗೆ, ಮೂರು ಜೋಡೆತ್ತು ಕುಂಟೆ ಹೊಡೆದರೆ, ಏಳು ರೈತರು ಕೆಲಸ ಮಾಡಿದ್ದಾರೆ. ಸ್ಪರ್ಧೆಯಲ್ಲಿ ರೈತ ಮಹಿಳೆ ಭಾಗವಹಿಸಿ, ಬಿತ್ತನೆ ಮಾಡಿದ್ದು ವಿಶೇಷ. ರೈತ ಶಿವರೆಡ್ಡ್ಡಿ ಜಮೀನನಲ್ಲಿ ಮಂಗಳವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 12ಗಂಟೆವರೆಗೆ 12ಎಕರೆ ಜಮೀನು ಉಳಿಮೆ ಮಾಡಿದ್ದಾರೆ. ಕೂರಿಗೆಗೆ ರೈತ ಮಹಿಳೆ ರೇಣಮ್ಮ ಶಿವರೆಡ್ಡಿ ಸತತ ಆರು ಗಂಟೆ ಬಿತ್ತನೆ ಮಾಡಿ, ಸಾಧನೆ ಮಾಡಿದ್ದಾರೆ.
ನರಸಪ್ಪ ನಾಗಪ್ಪ ಕೂರಿಗೆ ಕಟ್ಟಿದರೆ, ರೇಣಮ್ಮ ಶಿವರೆಡ್ಡಿ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಸಾಲು ಮುಚ್ಚಲು ಶರಣಪ್ಪ ಮಲ್ಲರೆಡ್ಡಿ, ಪಿಡ್ಡಪ್ಪ ಹುಲ್ಲೂರು, ಗಂಗಾಧರ ಬೋರೆಡ್ಡಿ, ರಾಮಣ್ಣ ತಿಮ್ಮಪ್ಪ ಮೂರು ಜೋಡೆತ್ತಿಗೆ ಕುಂಟೆ ಕಟ್ಟಿದ್ದಾರೆ. 6ಗಂಟೆಯಲ್ಲಿ 12ಎಕರೆ ಉಳಿಮೆ ಮಾಡಿ ಗಮನ ಸೆಳೆದಿದ್ದು, ರೈತ ಮಹಿಳೆ ಭಾಗವಹಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.
6ಗಂಟೆಯಲ್ಲಿ 12ಎಕರೆ ಬಿತ್ತನೆ ಮಾಡಿದ ರೈತರಿಗೆ ಸನ್ಮಾನಿಸಿ, ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿದೆ. ನಾಲ್ಕು ಜೋಡೆತ್ತು, ರೈತರಿಗೆ ಗುಲಾಲ್ ಎರಚಿ, ಡೊಳ್ಳು, ಭಾಜ ಭಜಂತ್ರಿಯೊಂದಿಗೆ ಮೆರವಣಿಗೆ ಮಾಡಲಾಯಿತು. ರೈತರ ಸಾಹಸವನ್ನು ಸುತ್ತ್ತಲಿನ ನೂರಾರು ರೈತರು ಜಮೀನಿಗೆ ಭೇಟಿ ನೀಡಿ ಕಣ್ಮುಂಬಿಕೊಂಡರು.
ಇವರೂ ಸಾಧನೆ ಮಾಡಿದ್ದಾರೆ
ತಾಲೂಕಿನಲ್ಲಿ ರೈತರ ನಡುವೆ ಕೃಷಿ ಸಂಬಂಧಿತ ಆರೋಗ್ಯಕರ ಸ್ಪರ್ಧೆ ನಡೆಯುತ್ತಿರುವುದು ಹೊಸದೇನಲ್ಲ. ಕಳೆದ ವರ್ಷ ಮಸರಕಲ್, ವಂದಲಿ, ಹೊಸೂರಿನಲ್ಲಿ ಒಕ್ಕಲುತನ ವಿಷಯವಾಗಿ ಸ್ಪರ್ಧೆ ನಡೆದಿದ್ದವು. ಈ ಸ್ಪರ್ಧೆ ರೈತರ ಸ್ವಾಭಿಮಾನದ ಸಂಕೇತವಾಗಿದ್ದು, ಇಲ್ಲಿಯೂ ಸಾಧನೆಗೆ ಸಿಳ್ಳೆ, ಚಪ್ಪಾಳೆ, ಕೇಕೆ, ಮೆರವಣಿಗೆ ಗೌರವಿದೆ. ಕಳೆದ ವರ್ಷ ವಂದಲಿ ರೈತ ಬೀರಪ್ಪ ನಾಲ್ವರು ರೈತರೊಂದಿಗೆ 4ಜೋಡೆತ್ತಿನಲ್ಲಿ 15ಎಕರೆ ಜಮೀನಿಲ್ಲಿ 10ಗಂಟೆಯಲ್ಲಿ ತೊಗರಿ ಬಿತ್ತನೆ ಮಾಡಿ ಸಾಧನೆ ಗೈದಿದ್ದರು. ಮಸರಕಲ್ ರೈತ ನಿಂಗಪ್ಪ 11ಗಂಟೆ 45ನಿಮಿಷದಲ್ಲಿ 15ಎಕರೆ ಮೆಣಸಿನಕಾಯಿ ಬೆಳೆಯಲ್ಲಿ ಎಡೆ ಹೊಡೆದಿದ್ದರು. ಅದೇ ಗ್ರಾಮದ ಯುವ ರೈತ ಮಾಳಿಂಗರಾಯ 11ಗಂಟೆ 50 ನಿಮಿಷದಲ್ಲಿ 17ಎಕರೆ ಮೆಣಸಿನಕಾಯಿ ಬೆಳೆಯಲ್ಲಿ ಎಡೆ (ಕಸ ತೆಗೆಯುವುದು) ಹೊಡೆದಿದ್ದಾರೆ. ಯುವ ರೈತರ ನಡುವೆ ನಡೆದ ಈ ಸ್ಪರ್ಧೆ ರಿಯಾಲಿಟಿ ಷೋಗಿಂತಲೂ ಆಕರ್ಷಕವಾಗಿತ್ತು.