

ಮಹಾಲಿಂಗಪುರ: ಪ್ರತ್ಯೇಕ ತಾಲೂಕು ರಚನೆ ಮಾಡಬೇಕು ಎಂದು ಆಗ್ರಹಿಸಿ ಕಳೆದ 1240 ದಿನಗಳಿಂದ ಮಹಾಲಿಂಗಪುರ ಪಟ್ಟಣದಲ್ಲಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಿಗೆ ಮನವರಿಕೆ ಮಾಡಿ ತಾಲೂಕು ಘೋಷಣೆ ಮಾಡಬೇಕು ಎಂದು ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದರು.
ಪಟ್ಟಣದ ವೆಂಕಟೇಶ ಆಸ್ಪತ್ರೆ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿದ್ದ ಸಚಿವರಾದ ಎಚ್.ಕೆ.ಪಾಟೀಲ, ಆರ್.ಬಿ.ತಿಮ್ಮಾಪೂರ ಅವರನ್ನು ಭೇಟಿ ಮಾಡಿ ಹೋರಾಟಗಾರರು ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಕಳೆದ 30 ವರ್ಷಗಳಿಂದ ತಾಲೂಕು ಬೇಡಿಕೆ ಇದೆ. ಈಚೆಗೆ ಸದನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹಾಲಿಂಗಪುರ ತಾಲೂಕು ರಚನೆ ವರದಿ ಪರಿಶೀಲಿಸದೆ ಕಡತಕ್ಕೆ ಹಾಕಿದ್ದು ತೀವ್ರ ಆಘಾತವಾಗಿದೆ. ನಮ್ಮ ವರದಿಯನ್ನು ಮರುಪರಿಶೀಲಿಸಿ ಸಿಎಂ ಅವರ ಭೇಟಿಗೆ ದಿನಾಂಕ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ರಬಕವಿ-ಬನಹಟ್ಟಿ, ತೇರದಾಳ ತಾಲೂಕುಗಳಿಗಿಂತ ಮೊದಲೇ ಮಹಾಲಿಂಗಪುರ ತಾಲೂಕು ರಚನೆ ಆಗಬೇಕಾಗಿತ್ತು. ರಾಜಕಾರಣ ಮತ್ತು ಆಡಳಿತಾತ್ಮಕ ಸಮಸ್ಯೆಯಿಂದ ವಿಳಂಬವಾಗಿದೆ. ಎಲ್ಲ ಅರ್ಹತೆ ಹೊಂದಿರುವ ಮಹಾಲಿಂಗಪುರ ತಾಲೂಕು ರಚನೆಗಾಗಿ ಶೀಘ್ರ ಸಿಎಂ ಅವರೊಂದಿಗೆ ಚರ್ಚಿಸಿ ಅವರ ಭೇಟಿಗಾಗಿ ದಿನಾಂಕ ನಿಗದಿಪಡಿಸುತ್ತೇವೆ ಎಂದರು.
ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಮಾಹಿತಿ ಕೊರತೆ ಮತ್ತು ಸದನದಲ್ಲಿ ಕಡತಕ್ಕೆ ಹಾಕಿದ ಲೋಪದೋಷ ಸರಿಪಡಿಸಿಕೊಂಡು ಸಿಎಂ ಮತ್ತು ಕಂದಾಯ ಸಚಿವರಿಗೆ ಮನವರಿಕೆ ಮಾಡಿ ಮಹಾಲಿಂಗಪುರ ತಾಲೂಕು ರಚನೆಗೆ ಪ್ರಯತ್ನಿಸುವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಕಾಂಗ್ರೆಸ್ ಕಿಸಾನ್ ಸಮಿತಿ ಜಿಲ್ಲಾಧ್ಯಕ್ಷ ಆನಂದ ಹಟ್ಟಿ, ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಪರಪ್ಪ ಬ್ಯಾಕೂಡ, ಸಿದ್ದು ಶಿರೋಳ, ಮಹಾದೇವ ಮಾರಾಪುರ, ಹಣಮಂತ ಜಮಾದಾರ, ರಪೀಕ ಮಾಲದಾರ ಇತರರು ಇದ್ದರು.