ಸಂವಿಧಾನಕ್ಕೆ ತಿದ್ದುಪಡಿ ಶಿಫಾರಸು: ಪರಿಶಿಷ್ಟ ಜಾತಿಯ ಅಸ್ಪೃಶ್ಯ ವರ್ಗಗಳಲ್ಲಿ ಆಶಾಭಾವನೆ

mysore
Published on

ಮೈಸೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಸರ್ಕಾರ ಶಿಫಾರಸು ಮಾಡಿದ್ದು, ಇದರಿಂದ ಪರಿಶಿಷ್ಟ ಜಾತಿಯ ಅಸ್ಪೃಶ್ಯ ವರ್ಗಗಳಲ್ಲಿ ಆಶಾಭಾವನೆ ಮೂಡಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.


ಎಸ್.ಎಂ.ಕೃಷ್ಣ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸಲು ನ್ಯಾ.ಸದಾಶಿವ ಆಯೋಗವನ್ನು ರಚಿಸಿತ್ತು. ಈಗ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ವರದಿ ಜಾರಿಗೆ ಬದ್ಧತೆ ಪ್ರದರ್ಶಿಸಿದೆ. ಸಂವಿಧಾನದ 341(3)ಗೆ ತಿದ್ದುಪಡಿ ಮಾಡದೆ ಒಳಮೀಸಲಾತಿ ಕೊಡಲು ಸಾಧ್ಯ ಇಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪರಿಶಿಷ್ಟ ಜಾತಿಗಳಲ್ಲಿರುವ ಆದಿಜಾಂಬವರು ಮತ್ತು ಛಲವಾದಿಗಳ ಉಪಪಂಗಡಗಳು ಸೇರಿದಂತೆ ಅಸ್ಪಶ್ಯ ಜಾತಿಗಳು ಒಳ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟ ನಡೆಸಿವೆ. ಇದೀಗ ಈ ಬೇಡಿಕೆ ಈಡೇರಿಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.


ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳ ಮೀಸಲು ಜಾರಿಗೆ ತರುವುದಾಗಿ ಹೇಳಿ ಸದಾಶಿವ ಆಯೋಗದ ವರದಿಯನ್ನು ಮೂಲೆಗುಂಪು ಮಾಡಿತ್ತು. ಜೆ.ಸಿ.ಮಾಧುಸ್ವಾಮಿ ನೇತೃತ್ವದ ಉಪಸಮಿತಿ ರಚಿಸಿ ಒಳ ಮೀಸಲು ಕಲ್ಪಿಸುವ ನಾಟಕ ಮಾಡಿದ್ದರು. ಆದರೆ, ವರದಿ ಜಾರಿಗೆ ಪ್ರಯತ್ನ ಮಾಡಲಿಲ್ಲ ಎಂದು ಕಿಡಿಕಾರಿದರು.


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಲು 2018ರಲ್ಲಿ ಸಿದ್ದರಾಮಯ್ಯ ಅವರು ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ್ದರು. ಆಯೋಗ ಪರಿಶಿಷ್ಟ ಜಾತಿಯ ಶೇ.15ರಿಂದ 17, ಪರಿಶಿಷ್ಟ ವರ್ಗಗಳಿಗೆ ಶೇ.3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಬೇಕು. ಒಟ್ಟಾರೆ ಶೇ.18ರಿಂದ 24ರಷ್ಟು ಮೀಸಲು ಹೆಚ್ಚಳಕ್ಕೆ ಶಿಫಾರಸು ಮಾಡಿತು. ವರದಿ ಅನ್ವಯ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದರು.


ಸಾಮಾಜಿಕ ನ್ಯಾಯ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ಮುಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಹಲವಾರು ಸವಲತ್ತು ನೀಡಿ ಸಬಲಗೊಳಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net