ವಸತಿಗಳಿಗೆ ಇ-ಸ್ವತ್ತು ವಿತರಿಸಲು ಸರ್ಕಾರಕ್ಕೆ ಶಿಫಾರಸು

sri eo
ಶಿಡ್ಲೆ ಸರ್ಕಾರಿ ಶಾಲೆಗೆ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಭೇಟಿ ನೀಡಿದರು. ಭುವನೇಂದ್ರ, ನಾಗಭೂಷಣ್, ಸೋಮಯ್ಯ, ತ್ರಿಮೂರ್ತಿ, ಸಂಧ್ಯಾ ಮರಿಯಪ್ಪ ಇತರರಿದ್ದರು.
Published on

ಶೃಂಗೇರಿ: ಆಶ್ರಯ ಯೋಜನೆಯಡಿ ವಾಸವಿರುವ ಜಾಗದ ಹಕ್ಕುಪತ್ರದ ಖಾತೆ ನಂಬರ್ ಅದಲು-ಬದಲಾಗಿರುವುದರಿಂದ ಇ-ಸ್ವತ್ತು ನೀಡಲು ತಾಂತ್ರಿಕ ದೋಷ ಎದುರಾಗಿದೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿ ಇ-ಸ್ವತ್ತು ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.

ಶುಕ್ರವಾರ ಮೆಣಸೆ ಗ್ರಾಮ ಪಂಚಾಯಿತಿಯ ಕಲ್ಕಟ್ಟೆ, ಮೆಣಸೆ, ಹೊಸನಗರ ವಸತಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮೆಣಸೆ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
1980-89ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕಂದಾಯ ಇಲಾಖೆ ಹಾಗೂ ತಾಲೂಕು ಕಚೇರಿಯಿಂದ ಹಕ್ಕ್ಕುಪತ್ರ ವಿತರಿಸಲಾಗಿತ್ತು. ಆದರೆ ಜಾಗದ ಖಾತೆ ನಂಬರ್ ಅದಲು-ಬದಲಾಗಿದೆ. ಈ ಕುರಿತು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಧಿಕಾರಿಗಳನ್ನು ಕೂಡಲೇ ಸಂಪರ್ಕಿಸಿದ್ದರೆ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತಿತ್ತು. ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಂಡ ಬಿಪಿಎಲ್ ಕಾರ್ಡ್‌ದಾರರಿಗೆ ಇ-ಸ್ವತ್ತು ನೀಡುವಲ್ಲಿ ಹೆಚ್ಚಿನ ಗಮನ ನೀಡಲಾಗುವುದು. ಹಕ್ಕುಪತ್ರದಲ್ಲಿ ಉಲ್ಲೇಖವಿದ್ದಷ್ಟೇ ಜಾಗದ ಮಂಜೂರಾತಿಗಾಗಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗೆ ಸಂಬಂಧಪಟ್ಟ ಇಲಾಖೆಗಳು ಬೇಡಿಕೆ ಸಲ್ಲಿಸಿದ್ದಾರೆ. ಶಿಡ್ಲೆ ಸರ್ಕಾರಿ ಶಾಲೆಯ ನಾಲ್ಕು ಎಕರೆ ಜಾಗದಲ್ಲಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗೆ ಒಂದು ಎಕರೆ ಭೂಮಿ ಮಂಜೂರಾತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಜನರು ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಲು ಸಂಕೋಚಪಡಬಾರದು. ಕೆಲವು ಬಾರಿ ಕಾನೂನು ತೊಡಕು ಇದ್ದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ಸುದೀಪ್, ತಹಸೀಲ್ದಾರ್ ಗೌರಮ್ಮ, ಕ್ಷೇತ್ರಶಿಕ್ಷಣಾಧಿಕಾರಿ ಭಾಗೀರಥಿ, ಸರ್ಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ದಯಾನಂದ್, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಉಪಾಧ್ಯಕ್ಷೆ ಭಾಗ್ಯಾ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ,ಧರೇಕೊಪ್ಪ ಗ್ರಾಪಂ ಸದಸ್ಯ ಭಾನುಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net