

ಮಡಿಕೇರಿ:
ಭೌಗೋಳಿಕವಾಗಿ ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯ ವಿವಿಧ ಪ್ರದೇಶಗಳ ಅಧ್ಯಯನಕ್ಕೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಮುಂದಿನ ವಾರ ಆಗಮಿಸಲಿದೆ. ಆದರೆ ಇದೇ ಸಂಸ್ಥೆಯ ತಜ್ಞರ ತಂಡ ಕೊಡಗಿನಲ್ಲಿ ೬ ವರ್ಷ ಹಿಂದೆ ಉಂಟಾಗಿದ್ದ ದುರಂತದ ಸಂದರ್ಭ ನೀಡಿದ್ದ ವರದಿಯಲ್ಲಿನ ಅಂಶಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ೨೦೧೮, ೨೦೧೯ರಲ್ಲಿ ಭೂಕುಸಿತಕ್ಕೆ ಕಾರಣವಾದ ಅಂಶಗಳು ಮತ್ತು ಮುಂದೆ ಇದರಿಂದ ಪಾರಾಗಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತಜ್ಞರು ಅನೇಕ ಶಿಫಾರಸ್ಸುಗಳನ್ನು ಮಾಡಿದ್ದರು. ಅದೆಲ್ಲವೂ ಈಗಲೂ ಕಡತದಲ್ಲೇ ಉಳಿದುಹೋಗಿದೆ.
ಪಕ್ಕದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಕೊಡಗಿನಲ್ಲೂ ಆತಂಕದ ಕಾರ್ಮೋಡ ಕವಿದಿದೆ. ಇದಕ್ಕೆ ಪೂರಕವಾಗಿ ಮಳೆಯ ಪ್ರಮಾಣ ಕೂಡ ಈ ವರ್ಷ ಜಾಸ್ತಿ ಇದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಳೆ ಸುರಿದಿದೆ. ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಆಗಿದೆ. ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಭೂಮಿಯಲ್ಲಿ ಜಲ ಹುಟ್ಟಿಕೊಳ್ಳಲಾರಂಭಿಸಿದೆ. ಇದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಕೆಲವು ಕಡೆ ಈಗಾಗಲೇ ವರದಿಯಾಗಿರುವ ಚಿಕ್ಕ-ಪುಟ್ಟ ಬರೆ ಕುಸಿತದ ಪ್ರಕರಣಗಳು ಕಳವಳ ಹುಟ್ಟಿಸಿದೆ.
೨೦೧೮ರಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ಹಾಗೂ ೨೦೧೯ರಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಭೂಕುಸಿತ ಸಂಭವಿಸಿದ ನಂತರ ಈ ಪ್ರದೇಶಗಳಿಗೆ ಭೇಟಿ ನೀಡಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ತಜ್ಞರ ತಂಡ ವಿಸ್ತತ ಅಧ್ಯಯನ ನಡೆಸಿ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ೨೭ ಪುಟಗಳ ಸಮಗ್ರ ವರದಿಯೊಂದನ್ನು ಕೊಟ್ಟಿತ್ತು. ಈ ಭೂಕುಸಿತ, ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಅಪಾಯಕಾರಿ ಬಿರುಕುಗಳಿಗೆ ಪ್ರಕತಿಯಲ್ಲಿ ಮಾನವನ ಹಸ್ತಕ್ಷೇಪವೇ ಕಾರಣ ಎನ್ನುವುದನ್ನು ತಮ್ಮ ವರದಿಯಲ್ಲಿ ತಜ್ಞರು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಅನಾಹುತಕ್ಕೆ ಕಾರಣವಾದ ಅಂಶಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಮಾಹಿತಿ ಕೊಡಲಾಗಿತ್ತು.
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳಲು ಅಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎನ್ನುವುದನ್ನು ವರದಿಯಲ್ಲಿ ಹೇಳಲಾಗಿತ್ತು. ಮಳೆ ನೀರು ಸಂರಕ್ಷಣೆಗೋಸ್ಕರ ಅರಣ್ಯ ಇಲಾಖೆ ವತಿಯಿಂದ ಬೆಟ್ಟದ ಮೇಲೆ ಇಂಗು ಗುಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ನಡೆದಿರುವ ಕಾಮಗಾರಿಗಳಿಂದ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುವಂತಾಗಿದೆ. ಬೆಟ್ಟದ ಸಮೀಪ ರಸ್ತೆಗಳ ವಿಸ್ತರಣೆಯ ವೇಳೆ ಬೆಟ್ಟದ ಇಳಿಜಾರು ಸಮತಟ್ಟು ಮಾಡುವಾಗಲೂ ಧಕ್ಕೆಯಾಗಿದೆ ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿತ್ತು.
ಭಾಗಮಂಡಲದ ಕೋರಂಗಾಲದಲ್ಲಿ ಮನೆಗಳ ನಿರ್ಮಾಣ ಸಂದರ್ಭದಲ್ಲಿ ಇಳಿಜಾರು ಪ್ರದೇಶ ಸಮತಟ್ಟು ಮಾಡುವ ವೇಳೆ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಅಲ್ಲಿ ಭೂಕುಸಿತ ಸಂಭವಿಸಿದೆ. ವೀರಾಪೇಟೆಯ ಅಯ್ಯಪ್ಪ ಬೆಟ್ಟದಲ್ಲಿ ಮನೆಗಳ ನಿರ್ಮಾಣ ಮಾಡುವಾಗ ಎಲ್ಲಿಯೂ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಲಿಲ್ಲ. ಎಲ್ಲೆಂದರಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲವೆಡೆ ಭೂಕುಸಿತ ಸಂಭವಿಸಿದೆ ಎನ್ನುವ ಮಾಹಿತಿಯನ್ನೂ ವರದಿಯಲ್ಲಿ ನೀಡಲಾಗಿತ್ತು.
ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನಡೆದ ದುರಂತಕ್ಕೆ ಆ ಪ್ರದೇಶದ ಸಮೀಪವೇ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಯೆ ಪ್ರಮುಖ ಕಾರಣ. ಗಣಿಗಾರಿಕೆ ನಡೆಯುವಲ್ಲಿ ಕಲ್ಲುಗಳನ್ನು ಸ್ಫೋಟಿಸುವಾಗ ಭೂ ಪದರದಲ್ಲಿ ಉಂಟಾದ ವ್ಯತ್ಯಾಸದಿಂದ ಭೂಕುಸಿತ ಉಂಟಾಗಿದೆ. ರಸ್ತೆ ನಿರ್ಮಾಣ ಸಂದರ್ಭದಲ್ಲೂ ಭೂಮಿಯ ಇಳಿಜಾರು ಪ್ರದೇಶದಲ್ಲಿ ವ್ಯತ್ಯಾಸ ಉಂಟಾಗಿದ್ದು, ಅನಾಹುತ ಸಂಭವಿಸಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ದುರಂತ ಸಂಭವಿಸಲು ಕಾರಣವಾದ ಅಂಶಗಳ ಬಗ್ಗೆ ವೈಜ್ಞಾನಿಕ ಆಧಾರದಲ್ಲಿ ಮಾಹಿತಿ ನೀಡಿದರೂ ಯಾರು ಕೂಡ ಎಚ್ಚೆತ್ತಿಕೊಳ್ಳಲಿಲ್ಲ. ಕೊಡಗಿನಾದ್ಯಂತ ದೊಡ್ಡ ದೊಡ್ಡ ಕಾಮಗಾರಿಗಳು ಯಾವುದೇ ಅಡ್ಡಿ-ಆತಂಕಗಳು ಇಲ್ಲದೆ ನಡೆಯುತ್ತಿದೆ. ಭವಿಷ್ಯದಲ್ಲಿ ಅನಾಹುತ ಸಂಭವಿಸಬಹುದು ಎನ್ನುವ ಯಾವುದೇ ಭಯ ಇಲ್ಲದೆ ಪ್ರಕೃತಿ ಜತೆಗೆ ಯುದ್ಧಕ್ಕೆ ಇಳಿದಂತೆ ಕಂಡುಬರುತ್ತಿರುವ ವರ್ತನೆಗಳಿಗೆ ಮುಂದೆ ಬಹುದೊಡ್ಡ ಬೆಲೆ ತೆರಬೇಕಾದೀತು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ.
ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಪ್ರದೇಶದಲ್ಲಿ ಮತ್ತೆ ಅಂಥ ದುರ್ಘಟನೆಗಳು ನಡೆಯದಂತೆ ತಡೆಯಲು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ತಜ್ಞರ ತಂಡ ಕೆಲವೊಂದು ಪರಿಹಾರೋಪಾಯಗಳನ್ನೂ ಸೂಚಿಸಿತ್ತು. ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸದಂತೆ ತುರ್ತಾಗಿ ’ಸ್ಲೋಪ್‌ಗ್ರೇಡಿಂಗ್’ ಮತ್ತು ತಡೆಗೋಡೆ ನಿರ್ಮಿಸಬೇಕು, ಇಳಿಜಾರು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯಲು ಸಣ್ಣ ಏಕ ಸಾಲಿನ ಚರಂಡಿ ನಿರ್ಮಿಸಬೇಕು, ಇಳಿಜಾರು ಪ್ರದೇಶಗಳಲ್ಲಿ ಅಲ್ಲಲ್ಲಿ ಸಸ್ಯಗಳನ್ನು ನೆಡಬೇಕು, ಕೋರಂಗಾಲದಲ್ಲಿಯೂ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚು ಸಸ್ಯಗಳನ್ನು ನೆಡಬೇಕು, ವಿರಾಜಪೇಟೆಯಲ್ಲಿ ಬೆಟ್ಟದ ಮೇಲೆ ಕಾಣಿಸಿಕೊಂಡಿರುವ ಬಿರುಕುಗಳನ್ನು ಅಗತ್ಯ ಸಾಮಗ್ರಿಗಳನ್ನು ಬಳಸಿ ಮುಚ್ಚಬೇಕು, ಆ ಸ್ಥಳದಲ್ಲಿ ತೇವಾಂಶ ಕಡಿಮೆಯಾಗುವಂತೆ ಮಾಡಬೇಕು, ಕೆಲವು ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಿ ನೀರು ಸರಾಗ ಹರಿಯಲು ದಾರಿ ಮಾಡಿಕೊಡಬೇಕು, ಭೂಕುಸಿತ ಪ್ರದೇಶದ ಅಪಾಯಕಾರಿ ಮನೆಗಳನ್ನು ತೆರವುಗೊಳಿಸಬೇಕು, ತೋರದಲ್ಲೂ ’ಸ್ಲೋಪ್ ಗ್ರೇಡಿಂಗ್’ ತಡೆಗೋಡೆ ನಿರ್ಮಾಣ ಮಾಡಬೇಕು… ಹೀಗೆ ತಜ್ಞರು ನೀಡಿದ ಯಾವುದೇ ಸಲಹೆಗಳು ಕೂಡ ೬ ವರ್ಷಗಳಾದರೂ ಕಾರ್ಯರೂಪಕ್ಕೆ ಬಂದಿಲ್ಲ.
ಈ ಮಧ್ಯೆ ಈಗ ಮತ್ತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಭೂ ಗರ್ಭ ಶಾಸ್ತ್ರಜ್ಞರನ್ನು ಕರೆಯಿಸಿ ಅಧ್ಯಯನ ಮಾಡಿಸಲು ಸಿದ್ಧತೆ ನಡೆದಿದೆ. ಅಧ್ಯಯನನ ನಡೆಸಿದ ನಂತರ ಯಥಾ ಪ್ರಕಾರ ಜಿಲ್ಲಾಡಳಿತಕ್ಕೆ ವರದಿಯೂ ಸಲ್ಲಿಕೆ ಆಗಲಿದೆ. ಸಂಬಂಧಿಸಿದವರು ಈ ವರದಿಯನ್ನು ಈಗಲಾದರೂ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವಂತಾಗಲಿ ಎನ್ನುವುದು ಸ್ಥಳೀಯರ ಆಶಯ.
ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದೆ. ಗುಡ್ಡು ಕುಸಿಯುವ ಪ್ರದೇಶಗಳಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ೧೦೦ ಕೋಟಿ ರೂ. ಮಂಜೂರು ಮಾಡಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿಯುವುದನ್ನು ತಡೆಯುವ ಅಗತ್ಯ ಮುನ್ನೆಚ್ಚರ ಕ್ರಮಗಳನ್ನು ಕೈಗೊಳ್ಳಲು ೩೦೦ ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಪಶ್ಚಿಮ ಘಟ್ಟವೂ ಸೇರಿದಂತೆ ದೇಶಾದ್ಯಂತ ಗುಡ್ಡ ಪ್ರದೇಶಗಳ ಸಂಪೂರ್ಣ ಅಧ್ಯಯನದ ಭೂಕುಸಿತ ಒಳಗಾಗುವ ಮ್ಯಾಪಿಂಗ್ ಕುರಿತಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾಕ್ಕೆ ಸರ್ಕಾರ ಹೆಚ್ಚಿನ ಹಣ ಮೀಸಲು ಇಡಬೇಕು. ಈ ಮ್ಯಾಪ್‌ಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಇನ್ನಷ್ಟು ಹಣಕಾಸಿನ ನೆರವಿನ ಅಗತ್ಯ ಇದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೊಡಗಿನ ಗಾಳಿಬೀಡು-ಆಂಚಾಲ್ ಪ್ರದೇಶದ ಮ್ಯಾಪಿಂಗ್ ಸೇರಿದಂತೆ ಒಟ್ಟು ೩೭ ಯೋಜನೆಗಳನ್ನು ೨೦೨೩-೨೦೨೪ ರಲ್ಲಿ ಕೈಗೊಂಡಿದೆ. ಆದರೆ ಈ ಯೋಜನೆಗಳು ವೇಗವಾಗಿ ಗುರಿ ಮುಟ್ಟಬೇಕಾದರೆ ಹಣಕಾಸಿನ ನೆರವು ಬೇಕಾಗುತ್ತದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಭೂ ಗರ್ಭ ಶಾಸ್ತ್ರಜ್ಞರ ತಂಡ ಜಿಲ್ಲೆಗೆ ಮುಂದಿನ ವಾರ ಆಗಮಿಸುವ ನಿರೀಕ್ಷೆಯಿದೆ. ಈ ತಂಡ ಭೂ ಕುಸಿತದ ಪ್ರದೇಶಗಳನ್ನು ಅಧ್ಯಯನ ನಡೆಸಲಿದೆ. ಭೂಕುಸಿತ ಘಟನೆ ವರದಿಯಾದ ಎಲ್ಲಾ ಗ್ರಾಮಗಳಿಗೂ ತೆರಳಿ ವಾಸ್ತವ ಸ್ಥಿತಿ, ಭೌಗೋಳಿಕ ಲಕ್ಷಣಗಳು, ಭೂಪದರಗಳ ರಚನೆ, ಕಲ್ಲಿನ ವಿಧಗಳು ಮತ್ತು ಭೂಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ಅಧ್ಯಯನ ಮಾಡಲಿರುವ ತಂಡ ನಂತರ ತಮ್ಮ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ.