

ಲಿಂಗದಹಳ್ಳಿ: ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಹೆಚ್.ಶ್ರೀ ನಿವಾಸ್ ಹೇಳಿದರು.
ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಬಳ್ಳಾವರದ ಸೆಂಟ್‌ಆ್ಯನ್ಸ್ ಶಾಲೆ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಎಂಟು ತಾಲೂಕುಗಳಿಂದ ಆಯ್ಕೆಯಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾರೆ. 95 ಹೊರ ಜಿಲ್ಲೆಯ ತೀರ್ಪುಗಾರರನ್ನು ಕರೆಸಿ ಅವರ ಮೂಲಕ ನೈಜ ಪ್ರತಿಭೆಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಉಪನಿರ್ದೇಶ ಜಿ.ಕೆ.ಪುಟ್ಟರಾಜು ಮಾತನಾಡಿ, ಜಿಲ್ಲೆಯಾದ್ಯಂತದಲ್ಲಿ ನಡೆದ ಕ್ಲಸ್ಟರ್, ಹೋಬಳಿ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಗೆದ್ದಿರುವ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ 12 ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಧಾರ್ಮಿಕ ಪಠಣ, ಪದ್ಯ, ಕವನಗಳ ವಾಚನ ಸೇರಿ ಅನೇಕ ಸ್ಪರ್ಧೆಗಳನ್ನು ನಡೆಸಿ ಗೆದ್ದ ಪ್ರತಿಭೆಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ,ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೆಂಟ್ ಆ್ಯನ್ಸ್ ಶಾಲೆ ಹಾಗೂ ದಾನಿಗಳ ಜತೆಗೂಡಿ ಊರ ಹಬ್ಬದಂತೆ ನಡೆಸಲಾಗಿದೆ ಎಂದರು.