

ಧಾರವಾಡ: ಮಕ್ಕಳಿಗೆ ಓದು ಹಾಗೂ ಕೆಲಸದ ಒತ್ತಡ ಹೇರದೆ ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಇದು ಅವರ ಉತ್ತಮ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಹೇಳಿದರು.
ನಗರದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಚಿಗುರು’ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ಕೇವಲ ಪಠ್ಯಪುಸ್ತಕ ಕಲಿಕೆಗೆ ಸೀಮಿತಗೊಳಿಸದೆ ಅವರಲ್ಲಿ ಅಡಗಿರುವ ಅಭಿರುಚಿಯನ್ನು ಗುರುತಿಸಿ ಪ್ರೇರೇಪಿಸಬೇಕು. ಮಕ್ಕಳು ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ಅಭಿನಯ ಕಲೆಗಳನ್ನು ಮೈಗೂಡಿಸಿಕೊಳ್ಳುವಂತೆ ಸಂಘ ಸಂಸ್ಥೆಗಳೊಂದಿಗೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದರು.
ಅತಿಥಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳಲ್ಲಿ ಹಿಂಜರಿಕೆ ಮನೋಭಾವ ಮೂಡದಂತೆ ಪಾಲಕರು ಮತ್ತು ಶಿಕ್ಷಕರು ಕಾಳಜಿ ವಹಿಸಬೇಕು. ಪ್ರತಿಯೊಂದರಲ್ಲೂ ಮುನ್ನುಗ್ಗುವ, ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಗುಣ ಬೆಳೆಸಬೇಕು ಎಂದರು.
ಮಕ್ಕಳ ರಂಗ ನಿರ್ದೇಶಕಿ ವೀಣಾ ಶರ್ಮ, ಬಿ. ಮಾರುತಿ, ಪ್ರಸಾಧನ ಕಲಾವಿದ ಸಂತೋಷ ಮಹಾಲೆ, ಡಾ. ಸುರೇಶ ಹಿರೇಮಠ, ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ಬಸವರಾಜ ಗುಡ್ಡಪ್ಪನವರ ನಿರೂಪಿಸಿದರು.
ನಂತರ ಮಕ್ಕಳಿಂದ ಭರತನಾಟ್ಯ, ಜಾನಪದ ನೃತ್ಯ, ಜಾನಪದ ಗೀತೆ, ತಬಲಾ ಸೋಲೋ, ಹಿಂದುಸ್ತಾನಿ ಗಾಯನ, ಸುಗಮ ಸಂಗೀತ, ಗೊಂಬೆಯಾಟ, ನೃತ್ಯರೂಪಕ, ನಾಟಕ, ಭಾವಗೀತೆ, ಕೋಲಾಟ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.