ಗ್ರಾಮೀಣ ಕ್ರೀಡಾಪಟುಗಳಿಗೆ ಮನ್ನಣೆ

sports day
Published on

ಅವಿನಾಶ್ ಜೈನಹಳ್ಳಿ ಮೈಸೂರು
ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದ್ದು, ಅದರಂತೆ ಈ ಬಾರಿಯೂ ಗ್ರಾಮೀಣ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.


2018 ಮತ್ತು 2019ನೇ ಸಾಲಿನ ಮಾದರಿಯಲ್ಲೇ ಈ ಬಾರಿ ದಸರಾ ಕ್ರೀಡಾಕೂಟದಲ್ಲಿ ನೇರವಾಗಿ ರಾಜ್ಯಮಟ್ಟದ ಸ್ಪರ್ಧೆಗಳನ್ನು ಮಾತ್ರ ಆಯೋಜಿಸುವ ಸಂಬಂಧ ಚರ್ಚೆ ನಡೆದಿತ್ತು. ಇತ್ತೀಚೆಗೆ ಮೈಸೂರಿನಲ್ಲಿ ಕ್ರೀಡಾ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲೂ ಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೇರವಾಗಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸುವಂತೆ ಸಲಹೆ ನೀಡಿದ್ದರು.

ಅದರಂತೆ ತಾಲೂಕು, ಜಿಲ್ಲಾ, ವಿಭಾಗೀಯ ಮಟ್ಟದ ಕ್ರೀಡಾಕೂಟ ನಡೆಸದೆ, ನೇರವಾಗಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಇಲಾಖೆಯಲ್ಲೂ ಚಿಂತನೆ ನಡೆದಿತ್ತು. ಹೀಗಾದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಮಾತ್ರ ಭಾಗವಹಿಸುವ ಅರ್ಹತೆ ಪಡೆಯುತ್ತಿದ್ದರು. ಆ ಮೂಲಕ ಗ್ರಾಮೀಣ ಪ್ರತಿಭೆಗಳು ದಸರಾ ಕ್ರೀಡಾಕೂಟದಿಂದ ದೂರ ಉಳಿಯುವ ಸಾಧ್ಯತೆ ಎದುರಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದ ಸಿದ್ಧತಾ ಸಭೆಯಲ್ಲಿ ನೇರವಾಗಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ತಾಲೂಕು, ಜಿಲ್ಲೆ, ವಿಭಾಗ ಹಾಗೂ ರಾಜ್ಯ ಮಟ್ಟ… ಹೀಗೆ ಹಂತ ಹಂತವಾಗಿಯೇ ಕ್ರೀಡಾಕೂಟ ಆಯೋಜಿಸಲು ಕ್ರೀಡಾ ಇಲಾಖೆ ತೀರ್ಮಾನಿಸಿ, ಆದೇಶ ಹೊರಡಿಸಿದೆ. ಆ ಮೂಲಕ ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.

ತಾಲೂಕು ಮಟ್ಟದಿಂದಲೇ ಸ್ಪರ್ಧೆ:

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟವನ್ನು ತಾಲೂಕು ಮಟ್ಟದಿಂದಲೇ ಆಯೋಜಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು, ಈ ಸಂಬಂಧ ಈಗಾಗಲೇ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲ ಜಿಲ್ಲೆಗಳ ಸಹಾಯಕ ನಿರ್ದೇಶಕರು/ಉಪ ನಿರ್ದೇಶಕರಿಗೆ ಸುತ್ತೋಲೆ ಕಳಿಸಿದ್ದಾರೆ. ಈ ಬಾರಿ 35ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ಎಲ್ಲ ಕ್ರೀಡಾಕೂಟಗಳನ್ನು ಅಕ್ಟೋಬರ್ ಮೊದಲ ವಾರದ ಒಳಗೆ ಮುಗಿಸುವಂತೆ ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.

ಅ.15ರಿಂದ 24ರ ವರೆಗೆ ರಾಜ್ಯಮಟ್ಟದ ಸ್ಪರ್ಧೆ:


ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಸೇರಿದಂತೆ ನಾನಾ ಕ್ರೀಡಾಂಗಣಗಳಲ್ಲಿ ಅ.15ರಿಂದ 24ರ ವರೆಗೆ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿವೆ. ಈ ಬಾರಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಆಯಾ ಜಿಲ್ಲಾ ಪಂಚಾಯಿತಿಗಳಿಂದ ಅನುದಾನ ನೀಡಲಾಗುತ್ತಿದೆ. ವಿಭಾಗ ಮಟ್ಟದ ಕ್ರೀಡಾಕೂಟಗಳಿಗೆ ಕ್ರೀಡಾ ಇಲಾಖೆ ಹಣ ನೀಡಲಿದೆ. ಪ್ರತಿ ವಿಭಾಗಕ್ಕೆ ತಲಾ 7 ಅಥವಾ 8 ಜಿಲ್ಲೆಗಳನ್ನು ಸೇರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಗಳೂರು, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಿವೆ. ಬೆಂಗಳೂರು ನಗರ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯನ್ನು ಮಾತ್ರ ಸೇರಿಸಲಾಗಿದೆ.

ಸ್ಪರ್ಧೆಗಳ ವಿವರ:


ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ಜಿಮ್ನಾಸ್ಟಿಕ್, ವಾಲಿಬಾಲ್, ಕಬಡ್ಡಿ, ಖೋ-ಖೋ, ಷಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಟೆನ್ನಿಸ್, ಫುಟ್ಬಾಲ್, ಬ್ಯಾಡ್ಮಿಂಟನ್, ಹಾಕಿ ಪಂದ್ಯಾವಳಿ. ಅಥ್ಲೆಟಿಕ್ಸ್‌ನಲ್ಲಿ 100, 200, 400, 800, 1500 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 4100 ಮೀ. ಹಾಗೂ 4400 ಮೀ. ರಿಲೇ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ 5,000 ಮೀ. ಓಟ, 110 ಮೀ. ಹರ್ಡಲ್ಸ್ ನಡೆಯಲಿದೆ. ಮಹಿಳೆಯರಿಗೆ 3,000 ಮೀ. ಓಟ, 100 ಮೀ. ಹರ್ಡಲ್ಸ್ ಓಟ ನಡೆಯಲಿದೆ.


ಈಜು ಸ್ಪರ್ಧೆ: 100, 200, 400 ಮೀ. ಫ್ರೀ ಸ್ಟೈಲ್, 100, 200 ಮೀ. ಬ್ಯಾಕ್ ಸ್ಟ್ರೋಕ್, 100 ಮೀ. ಬಟರ್ ಫ್ಲೈ, 100, 200 ಮೀ. ಬ್ರೆಸ್ಟ್‌ಸ್ಟ್ರೋಕ್, 200 ಮೀ. ಇಂಡುವಿಜಲ್ ಮಿಡ್ಲೆ, 4*100 ಮೀ. ಫ್ರೀಸ್ಟೈಲ್ ರಿಲೇ ಇರುತ್ತದೆ.
ಮೇಲಿನ ಇಷ್ಟೂ ಸ್ಪರ್ಧೆಗಳು ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ನಡೆಯಲಿವೆ.
ಸೈಕ್ಲೋಥಾನ್, ದೇಹದಾರ್ಢ್ಯ: ದೇಹದಾರ್ಢ್ಯ, ಸೈಕ್ಲೋಥಾನ್ ಹಾಗೂ ಮ್ಯಾರಥಾನ್ ಸ್ಪರ್ಧೆ ತಾಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ನಡೆಯುವುದಿಲ್ಲ. ಬದಲಾಗಿ ಮೈಸೂರಿನಲ್ಲಿ ರಾಜ್ಯ ಮಟ್ಟದಲ್ಲಿ ಮಾತ್ರ ಈ ಸ್ಪರ್ಧೆಗಳು ನಡೆಯಲಿವೆ.

ಪ್ರಥಮ 8 ಸಾವಿರ ರೂ. ನಗದು!:

ಕ್ರೀಡಾಕೂಟದ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುತ್ತದೆ. ವೈಯಕ್ತಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ 8 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ರೂ., ತೃತೀಯ ಸ್ಥಾನಕ್ಕೆ 2.5 ಸಾವಿರ ರೂ. ಹಾಗೂ ಗುಂಪು ಕ್ರೀಡೆಗಳಲ್ಲಿ(ಒಬ್ಬರಿಗೆ) ಪ್ರಥಮ ಸ್ಥಾನಕ್ಕೆ 2 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 1.5 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 1 ಸಾವಿರ ರೂ. ನಗದು ಬಹುಮಾನ ನೀಡಲು ನಿಗದಿ ಮಾಡಲಾಗಿದ್ದು, ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು, ಇಲಾಖೆಯ ಯಿಂದ ರಾಜ್ಯದ ಎಲ್ಲ ಜಿಲ್ಲೆಯ ಸಹಾಯಕ ನಿರ್ದೇಶಕರು/ಉಪ ನಿರ್ದೇಶಕರಿಗೆ ಸುತ್ತೋಲೆ ಕಳಿಸಲಾಗಿದೆ. ಅಕ್ಟೋಬರ್ ಮೊದಲ ವಾರದ ಒಳಗೆ ತಾಲೂಕು, ಜಿಲ್ಲೆ ಹಾಗೂ ವಿಭಾಗ ಮಟ್ಟದ ಕ್ರೀಡಾಕೂಟಗಳನ್ನು ಪೂರ್ಣಗಳಿಸಲು ಸೂಚಿಸಲಾಗಿದೆ. ಕ್ರೀಡಾಕೂಟಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ತಿಪ್ಪೇಸ್ವಾಮಿ, ಸಹ ನಿರ್ದೇಶಕಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net