

ಹುಬ್ಬಳ್ಳಿ: ನಿರಂತರ ಭಗವದ್ಗೀತೆ ಪಠಣ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗಲಿದೆ. ಅಷ್ಟೊಂದು ಕಾಂತಿ, ಶಕ್ತಿ ಭಗವದ್ಗೀತೆಯಲ್ಲಿದೆ ಎಂದು ಆಧ್ಯಾತ್ಮಿಕ ಚಿಂತಕಿ, ನಂದೂ ಕೆಮಿಕಲ್ಸ್ನ ಮುಖ್ಯಸ್ಥೆ ಉಷಾ ಹೆಗಡೆ ಅಭಿಪ್ರಾಯಪಟ್ಟರು.
ಅಧಿಕ ಮಾಸ ನಿಮಿತ್ತ ರಾಧೆ ರಾಧೆ ಸತ್ಸಂಗ ವತಿಯಿಂದ ನಗರದ ಶಿರೂರ ಪಾರ್ಕ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಗವದ್ಗೀತೆ ಪಠಣ ಹಾಗೂ ಚಿಂತನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಭಗವದ್ಗೀತೆಯಲ್ಲಿ ಅನನ್ಯ ಶಕ್ತಿ ಇದೆ. ವಿಶ್ವರೂಪವೇ ಅದರಲ್ಲಿ ದರ್ಶನವಾಗಿದೆ. ಜೀವನದ ಪ್ರತಿ ಹೆಜ್ಜೆಯೂ ಅದರಿಂದ ಕಲಿಯಬಹುದು. ಯುವ ಜನಾಂಗಕ್ಕಂತೂ ಜೀವನದ ಸಾರವೇ ಅಡಗಿದೆ. ಏನು ಮಾಡಬೇಕು, ಮಾಡಬಾರದೆಂಬ ಚಿಂತನೆಗಳ ಆಳವಿದೆ. ಪ್ರತಿ ನಿತ್ಯ ಪಠಣದಿಂದ ನಮ್ಮ ಬದುಕೇ ಬಂಗಾರವಾಗುತ್ತದೆ ಎಂದರು.
ಸತತ ಅಧ್ಯಯನದಿಂದ ಸಂಸ್ಕಾರ, ಮೋಕ್ಷ ಪ್ರಾಪ್ತಿ ಆಗಲಿದೆ. ನಾವು ಯಾವ ಮನೋಭಾವ ಇಟ್ಟುಕೊಂಡು ಅಧ್ಯಯನ ಮಾಡುತ್ತೇವೆಯೋ ಅದೇ ಫಲ ನಮಗೆ ಲಭಿಸುತ್ತದೆ. ಗೀತೆಯ ಸಂದೇಶವನ್ನು ಎಲ್ಲರೂ ಕೇಳಿರಬಹುದು. ಆದರೆ, ಫಲ ಅವರು ಬಯಸಿದಂತೆ ಸಿಕ್ಕಿದೆ. ಗೀತೆಯ ಪಠಣ ಹಾಗೂ ಗಂಗೋಧಕ ಸೇವಿಸಿದವರಿಗೆ ಯಮನಿಂದಲೂ ಕೂಡ ಭಯವಿಲ್ಲ ಎಂದು ಹೇಳಿದರು.
ನಂತರ ಭಜನೆ, ಆರತಿ, ಪ್ರಸಾದ ವಿತರಣೆ ನಡೆಯಿತು.
ಪ್ರಮುಖರಾದ ಸ್ನೇಹಾ ಶೆಟ್ಟರ್, ಗೀತಾ ಪಾಟೀಲ, ಸುಜಾತ ರೆಡ್ಡಿ, ಡಾ. ಅಪರ್ಣಾ, ಮಂಜುಳಾ ಮಾಲತೇಶ, ಸುಧಾ ಕಾಮತ್, ಇನ್ನರ್ವೀಲ್ ಕ್ಲಬ್ ಪದಾಧಿಕಾರಿಗಳು, ಲದ್ದಾ ಪರಿವಾರ, ಇತರರು ಇದ್ದರು.