

ವಿಜಯವಾಣಿ ಸುದ್ದಿಜಾಲ ಉಪ್ಪಳ
ಆಶ್ರಮದ ಬೆಳವಣಿಗೆಯಲ್ಲಿ ಎಲ್ಲೆಡೆಯ ಭಕ್ತರ ಕೊಡುಗೆ ಅಪಾರ. ದೇಹದ ನಾಡಿಗಳ ಬೆಳವಣಿಗೆಯಲ್ಲಿ, ತನ್ಮೂಲಕ ಆರೋಗ್ಯದ ವೃದ್ಧಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಕೊಂಡೆವೂರು ಮಠದಲ್ಲಿ ಭಾನುವಾರ ಶ್ರೀಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆದ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸಹಿತ ಶ್ರೀ ವಿಷ್ಣುಸಹಸ್ರನಾಮ ಹವನ ಸಂದರ್ಭ ಆಶೀರ್ವಚನ ನೀಡಿದರು.
ವಿವಿಧೆಡೆಗಳಿಂದ ಭಕ್ತರು ತಂಡವಾಗಿ ಬಂದು ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಡೆಸಿದರು. ಬೆಂಗಳೂರಿನ ರಾಜ್ಯಸಭಾ ಸದಸ್ಯ ಕೆ.ನಾರಾಯಣ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹೈದರಾಬಾದಿನ ಜ್ಯೋತಿಷಿ ಟಿ.ಎಸ್.ವಿನೀತ್ ಭಟ್, ಬೆಂಗಳೂರಿನ ಸಮಾಜ ಸೇವಕ ಬಿ.ಟಿ.ರಾಮಚಂದ್ರಪ್ಪ, ತಿರುವನಂತಪುರಂನ ಉದ್ಯಮಿ ರಾಜೇಶ್ ಪಡಿಞಟಿಲ್, ವಿಶ್ವ ಹಿಂದು ಪರಿಷತ್ತಿನ ದಕ್ಷಿಣ ಪ್ರಾಂತ ಸೇವಾ ಪ್ರಮುಖ ಪ್ರೇಮಾನಂದ ಶೆಟ್ಟಿ ಮಾತನಾಡಿದರು.
ಆಶ್ರಮದ ವಿಶ್ವಸ್ಥ ವಿಶ್ವನಾಥ ವೆಂಗೆರೆ, ಪಿ.ಆರ್.ಶೆಟ್ಟಿ ಕುಳೂರು, ಬೆಂಗಳೂರಿನ ಬಾಲಕೃಷ್ಣ ಉಪಸ್ಥಿತರಿದ್ದರು. ನಿವೃತ್ತ ಮುಖ್ಯಶಿಕ್ಷಕ ಗೋಪಾಲ ಭಟ್ ಸಿ.ಎಚ್. ಬರೆದ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಕಿರು ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಗಾಯತ್ರಿ ಕೊಂಡೆವೂರು ಪ್ರಾರ್ಥನೆ ಹಾಡಿದರು. ಡಾ.ಜಯಪ್ರಕಾಶ್‌ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ದಿನಕರ ಹೊಸಂಗಡಿ, ಕೆ.ಎಂ.ಗಂಗಾಧರ್ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.