

ಮೈಸೂರು: ದಸರಾ ಮಹೋತ್ಸವಕ್ಕೆ ನವವಧುವಿನಂತೆ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಆವರಣ ಜಂಬೂಸವಾರಿ ಮುಗಿದ ಮರು ದಿನವಾದ ಗುರುವಾರ ಕಸದ ಕೊಂಪೆಯಾಗಿತ್ತು.
ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಸಹಸ್ರಾರು ಜನರು ಸೇರಿದ್ದರು. ಆ ಸಂದರ್ಭದಲ್ಲಿ ಅವರು ಬಿಸಾಡಿದ ನೀರಿನ ಬಾಟಲಿಗಳು ಇತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಆವರಣದಲ್ಲಿ ಹರಡಿಕೊಂಡಿದ್ದ ಕಸದ ರಾಶಿಯನ್ನು ಪೌರಕಾರ್ಮಿಕರು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.
ಸ್ವಚ್ಛತೆಗಾಗಿ ಅರಮನೆ ಮಂಡಳಿ ಹಾಗೂ ನಗರಪಾಲಿಕೆಯಿಂದ ಅನೇಕ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಮುಗಿದ ಬಳಿಕ ಬುಧವಾರ ರಾತ್ರಿಯಿಂದಲೇ ಅರಮನೆ ಆವರಣದಲ್ಲಿ ಈ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಇನ್ನು ಅರಮನೆ ಆವರಣದಲ್ಲಿ ಅಳವಡಿಸಿದ್ದ ಪೆಂಡಾಲ್, ಕುರ್ಚಿ, ಮೇಜುಗಳನ್ನು ನೂರಾರು ಕಾರ್ಮಿಕರು ತೆರವುಗೊಳಿಸುವ ಕಾರ್ಯದಲ್ಲಿ ನಿರತಯಾಗಿದ್ದರು.
ನಗರಪಾಲಿಕೆಯಿಂದ ನಿಯೋಜಿಸಿರುವ 150 ಕ್ಕೂ ಹೆಚ್ಚಿನ ಪೌರಕಾರ್ಮಿಕರು ಮೆರವಣಿಗೆ ಸಾಗಿದ ಸಯ್ಯಜಿರಾವ್ ರಸ್ತೆಯಲ್ಲಿ ಬುಧವಾರ ರಾತ್ರಿಯಿಂದಲೇ ಸ್ವಚ್ಛತಾ ಕೆಲಸ ನಡೆಸಿದರು. ಸದರಿ ಮಾರ್ಗದಲ್ಲಿ ಗುಂಪುಗಳಾಗಿ ಪೌರಕಾರ್ಮಿಕರು, ಗುರುವಾರ ಸಂಜೆವರೆಗೂ ಸ್ವಚ್ಛತೆಯಲ್ಲಿ ತೊಡಗಿದ್ದರು. ಪಂಜಿನ ಕವಾಯತು ಕಾರ್ಯಕ್ರಮ ನಡೆದ ಬನ್ನಿಮಂಟಪದ ಕವಾಯತು ಮೈದಾನದಲ್ಲೂ ಗುರುವಾರ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.