ಸೇವೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ

BYN-May23-3-SLVT Bhajan
Published on

ಬೈಂದೂರು: ಪ್ರತಿಫಲ ಅಪೇಕ್ಷೆ ಇಲ್ಲದೆ ನಡೆಸುವ ಎಲ್ಲ ಸೇವೆಯಿಂದ ಭಗವಂತನ ಅನುಗ್ರಹಕ್ಕೆ ಪ್ರಾಪ್ತರಾಗುತ್ತೇವೆ. ಕಲಿಯುಗದಲ್ಲಿ ಭಜನೆಯಿಂದ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು. ನಮ್ಮ ಹಿರಿಯರು ಭಜನೆಯನ್ನು ಶ್ರೇಷ್ಠತೆಯ ಕಡೆಗೆ ಕೊಂಡು ಹೋಗುವ ಕೆಲಸ ಮಾಡಿದ್ದಾರೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಇರುವ ಶ್ರೀಗಳು ಶುಕ್ರವಾರ ಏಕಾದಶೀ ಪ್ರಯುಕ್ತ ನಡೆದ ಅಖಂಡ ಏಕಾಹ ಭಜನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲರೂ ಒಟ್ಟಾಗಿ ಭಜನೆಯಲ್ಲಿ ಕುಳಿತು ಪೂರ್ತಿ ಭಜನೆಯಲ್ಲಿ ಸೇರಿ ಹೋದಂತೆ ನಮ್ಮಲ್ಲಿ ಒಂದು ವಿಧವಾದ ತರಂಗ ಹೊರಹೊಮ್ಮಲು ಶುರುವಾಗುತ್ತದೆ. ಅವುಗಳೇ ಶಕ್ತಿಯ ತರಂಗಗಳು. ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಮಗಾಗುತ್ತದೆ. ಇವುಗಳು ನಮಗೆ ಮಾತ್ರ ಆನಂದ ಉಂಟುಮಾಡುವುದಿಲ್ಲ, ನಮ್ಮ ಸುತ್ತ ಮುತ್ತ ಕುಳಿತವರಿಗೂ ಹರಡುತ್ತವೆ. ಅವರಿಗೂ ಆನಂದದ ಅರಿವಾಗುತ್ತದೆ ಎಂದರು.

ಬೆಳಗ್ಗೆ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು. ನಂತರ ಶ್ರೀಗಳು ಸಮಾಜದವರಿಗೆ ತಪ್ತ ಮುದ್ರಾಧಾರಣೆಗೈದರು. ಉಪ್ಪುಂದ ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ, ಗಂಗೊಳ್ಳಿ ಶ್ರೀ ವೀರವಿಠಲ ಭಜನಾ ಮಂಡಳಿ, ಯಳಜಿತ್ ರಾಮಕೃಷ್ಣ ಕುಟೀರ, ಅಂಪಾರು ಶ್ರೀರಾಮ ಭಜನಾ ಮಂಡಳಿ, ಭಟ್ಕಳ ಸರಸ್ವತಿ ಮಹಿಳಾ ಭಜನಾ ಮಂಡಳಿ, ನಿಶಾಂತ ಕಿಣಿ ಉಪ್ಪುಂದ, ಶೇಷಗಿರಿದಾಸ್ ರಾಯಚೂರು, ತೆಕ್ಕಟ್ಟೆ ಸಧೀಂದ್ರತೀರ್ಥ ಭಜನಾ ಮಂಡಳಿಯಿಂದ ನಿರಂತರವಾಗಿ ಭಜನ್ ಸಂಕೀರ್ತನೆ ನಡೆಯಿತು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಜೇಶ ಪೈ, ಟ್ರಸ್ಟಿಗಳು, ದಿನದ ಸೇವಾದಾರ ಯು.ಸದಾನಂದ ಪ್ರಭು ಮತ್ತು ಸಹೋದರರು, ಊರ ಹತ್ತು ಸಮಸ್ತರು, ಭಕ್ತರು ಇದ್ದರು. ಶನಿವಾರ ಲಘು ವಿಷ್ಣು ಹವನ, ಸಂಜೆ ಗುರುಗಳ ದಿಗ್ವಿಜಯೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net