ದಾಖಲೆ ಪುಟ ಸೇರಿದ ಅಣ್ಣೂರು ಗ್ರಾಪಂ: ಶಾಸಕ ಕೆ.ಎಂ.ಉದಯ್ ಮೆಚ್ಚುಗೆ

Receiving the award from the India Book of Records Mandya
Published on

ಕೆ.ಎಂ.ದೊಡ್ಡಿ: ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜತೆಗೆ ವಿಭಿನ್ನ ಚಟುವಟಿಕೆಗಳ ಮೂಲಕವೇ ರಾಜ್ಯದ ಗಮನಸೆಳೆದಿರುವ ಅಣ್ಣೂರು ಗ್ರಾಮ ಪಂಚಾಯಿತಿ ದಾಖಲೆ ಪುಟ ಸೇರಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಅಣ್ಣೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಪ್ರಶಸ್ತಿ ಸ್ವೀಕರಿಸಿ ಹಾಗೂ ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನದ ಸಮಾರೋಪ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನ ಆಗುವುದು ಸುಲಭದ ಮಾತಲ್ಲ. ಅನೇಕ ಮಾನದಂಡ ಅಳವಡಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವ ರಾಜಕೀಯವೂ ನಡೆಯುವುದಿಲ್ಲ. ಇವೆಲ್ಲವನ್ನು ಮೀರಿ ಅಣ್ಣೂರು ಗ್ರಾಪಂ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಅಣ್ಣೂರು ಗ್ರಾಪಂ ನನ್ನ ಶಾಸಕತ್ವದ ಅವಧಿಯಲ್ಲಿಯೇ ದಾಖಲೆಗೆ ಸೇರ್ಪಡೆಯಾಗಿರುವುದು ಹರ್ಷ ತಂದಿದೆ. ಅಭಿವೃದ್ಧಿ ಕೆಲಸಗಳು ನಿಗದಿತದೊಳಗೆ ಆಗಲು ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯ. ಈ ಐತಿಹಾಸಿಕ ಸಾಧನೆ ಹಿಂದೆ ನಿಂತಿರುವ ಎಲ್ಲ ಮಹಿಳೆಯರು, ಅಧಿಕಾರಿಗಳು ಹಾಗೂ ಸ್ಥಳೀಯ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು. ಅಣ್ಣೂರು ಗ್ರಾಪಂ ನಿರ್ಣಯ ಕೈಗೊಂಡರೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಅವರು, ಸದಸ್ಯರು ಹಾಗೂ ಅಧಿಕಾರಿಗಳು, ಅಣ್ಣೂರು, ಅಲಭುಜನಹಳ್ಳಿ ಹಾಗೂ ಕಾರಕಹಳ್ಳಿ ಗ್ರಾಮದ ಮಹಿಳೆಯರ ಸಹಕಾರದಲ್ಲಿ ಒಂದೇ ದಿನ ತಮ್ಮ ಮನೆ ಎದುರು ಸಾವಿರಾರೂ ರಂಗೋಲಿ ಬಿಡಿಸಿದ ಪರಿಣಾಮ ಇಂತಹ ಅಭೂತಪೂರ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು ಎಂದರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ತೀರ್ಪುಗಾರ ಡಾ.ಹರೀಶ್ ಮಾತನಾಡಿ, ಅಣ್ಣೂರು ಗ್ರಾಪಂ ವ್ಯಾಪ್ತಿಯ ಮಹಿಳೆಯರು ಇತಿಹಾಸವನ್ನು ಸೃಷ್ಠಿಸಿದ್ದಾರೆ. ಈ ಅಪರೂಪದ ಸಾಧನೆಯನ್ನು ದೇಶವೇ ತಿರುಗಿ ನೋಡುತ್ತದೆ. ಭಾರತೀಯ ಸಂಪ್ರದಾಯದ ಪ್ರತೀಕವಾದ ರಂಗೋಲಿ ಬಿಡಿಸುವ ಮೂಲಕ ಮೌಲ್ಯ ದೊರಕುವಂತೆ ಮಾಡಿದ್ದಾರೆ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ತಾಪಂ ಇಒ ರಾಮಲಿಂಗಯ್ಯ, ಅಣ್ಣೂರು ಗ್ರಾಪಂ ಅಧ್ಯಕ್ಷೆ ಸಿ.ಅಶ್ವಿನಿ, ಉಪಾಧ್ಯಕ್ಷ ನಾಗರಾಜ್, ಪಿಡಿಒ ಎಂ.ಆರ್.ಅಶ್ವಿನಿ, ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಆರ್.ಮನೋಹರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್‌ಕುಮಾರ್ ಇತರರಿದ್ದರು.

ಇದೇ ವೇಳೆ ಗ್ರಾಮದ ಮಹಿಳೆಯರು ಪೌಷ್ಟಿಕ ಆಹಾರ ಮೇಳದ ಸ್ಪರ್ಧೆ ನಡೆಯಿತು. 20ಕ್ಕೂ ಹೆಚ್ಚು ಮಹಿಳೆಯರಿಗೆ ಯೋಗ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಪಂ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net