

ಮೈಸೂರು: ಕಾಂತರಾಜು ವರದಿ ಸ್ವೀಕರಿಸುವಂತೆ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲೆ ಮತ್ತು ತಾಲೂಕು ಮಟ್ಟದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.
ಜಾತಿ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವಂದ್ವ ಹೇಳಿಕೆ ನೀಡುವುದನ್ನು ಖಂಡಿಸುತ್ತೇನೆ. ಕೂಡಲೇ ವರದಿ ಸ್ವೀಕರಿಸಿ ಸದನದಲ್ಲಿ ಚರ್ಚೆಗೆ ಇಡಬೇಕು. ಎಲ್ಲ ಜಾತಿಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು, ಎರಡು ಪ್ರಬಲ ಜಾತಿಯ ವಿರೋಧಕ್ಕೆ ಮಣಿಯದೆ, ಈವರೆಗೆ ಹಿಂದುಳಿದ ಜಾತಿಯ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.
ಬಹುಚರ್ಚಿತ ಅರಳಿಕಟ್ಟೆ ಸಂವಾದದಲ್ಲಿ ಜನಸಾಮಾನ್ಯರೊಂದಿಗೆ ಅವರ ಕಷ್ಟ ಸುಖ ಕೇಳುವುದರ ಜತೆಗೆ ರಾಜಕೀಯ ಧುರೀಣರು, ಎಲ್ಲ ಮಠಾಧಿಪತಿಗಳನ್ನೂ ಭೇಟಿ ಮಾಡುತ್ತಿರುವುದಾಗಿ ತಿಳಿಸಿದರು.
ಸ್ವಾತಂತ್ರೃದ ಫಲ ನಮ್ಮ ಕಟ್ಟಕಡೆಯ ಜನರವರೆಗೆ ತಲುಪಿಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಾ ದೆಹಲಿಯ ಶೈಕ್ಷಣಿಕ ಕ್ರಾಂತಿ, ಆರೋಗ್ಯ ವ್ಯವಸ್ಥೆ ಹಾಗೂ ಜನಪರ ಆಡಳಿತದ ಬಗ್ಗೆ ತಿಳಿಸುತ್ತಿರುವುದಾಗಿ ಹೇಳಿದರು.
ಪಕ್ಷದ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಸಂಘಟನೆ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಮಾಳವಿಕಾ ಗುಬ್ಬಿವಾಣಿ, ಸೋಸಲೆ ಸಿದ್ದರಾಜು, ರವಿಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದ್, ಯುವ ಘಟಕದ ಅಧ್ಯಕ್ಷ ಲೋಹಿತ್, ಜಿಲ್ಲಾ ಅಧ್ಯಕ್ಷ ರಂಗಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಉಷಾ, ಮಾಧ್ಯಮ ಉಸ್ತುವಾರಿ ವಿದ್ಯಾರಣ್ಯ ಇದ್ದರು.