ಇ-ಬೀಟ್​ ವ್ಯವಸ್ಥೆಯಡಿ ಅಹವಾಲು ಸ್ವೀಕಾರ

Published on

ಗೌರಿಬಿದನೂರು: ನಗರದ ಪೊಲೀಸ್​ ಠಾಣೆಗಳ ಇ ಬೀಟ್​ ವ್ಯವಸ್ಥೆ ಅನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳ ಪಟ್ಟಿ ಮಾಡಿಕೊಂಡು ಪೊಲೀಸ್​ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ, ಅಹವಾಲು ಆಲಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ನಗರ ಠಾಣೆ ಪಿಎಸ್​ಐ ಗೋಪಾಲ್​ ತಿಳಿಸಿದರು. ನಗರದ 11ನೇ ವಾರ್ಡ್​ನಲ್ಲಿ ಶುಕ್ರವಾರ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಸರು ಮನೆ ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜನರಲ್ಲಿ ಸುರತಾ ಮನೋಭಾವ ಮೂಡಲಿದೆ. ಸೈಬರ್​ ಅಪರಾಧಗಳ ಅರಿವು ಮೂಡಿಸಲಾಗುವುದು, ಪೊಲೀಸ್​ ಇಲಾಖೆ ನೆರವು ಪಡೆಯುವ ವಿಧಾನ ಸೇರಿ ಇಲಾಖೆಯ ಸಮಗ್ರ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಅಪರಾಧಗಳ ಸ್ವರೂಪ ಈಗ ಡಿಜಿಟಲ್​ ರೂಪ ಪಡೆದಿದೆ. ಡಿಜಿಟಲ್​ ಅರೆಸ್ಟ್​ ಮೂಲಕ ಹೆದರಿಸಿ ಹಣ ಕೀಳುವ, ಮೋಸ ಮಾಡುವ ಕೃತ್ಯಗಳು ಹೆಚ್ಚಾಗಿವೆ. ಬಣ್ಣದ ಮಾತು ಹೇಳಿ ಅನೇಕ ರೀತಿಯಲ್ಲಿ ಮೋಸ, ವಂಚನೆ ನಡೆಯುತ್ತಿದ್ದು, ಈ ಕುರಿತು ಪೊಲೀಸರು ಮನೆಮನೆಗೆ ಭೇಟಿ ವೇಳೆ ಜಾಗೃತಿ ಮೂಡಿಸಲಿದ್ದಾರೆ ಎಂದರು. ಈ ಹಿಂದೆ ದೂರುದಾರರು ಠಾಣೆಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು. ಈಗ ಪೊಲೀಸರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್​ ವ್ಯವಸ್ಥೆ ಸ್ನೇಹಮಯಿಯಾಗಿದೆ. ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ಮಾಡಬಹುದಾಗಿದೆ ಎಂದರು.

ನಗರ ಪೊಲೀಸ್​ ಠಾಣೆ ಪೇದೆ ಸಂತೋಷ್​ ಮಾತನಾಡಿ, ಮಹಿಳೆಯರು ರಂಗೋಲಿ ಹಾಕುವಾಗ, ಮಾರುಕಟ್ಟೆಗೆ ತೆರಳುವ ಸಂದರ್ಭಗಳಲ್ಲಿ ಒಡವೆ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಚ್ಚರಿಕೆ ವಹಿಸಬೇಕು. ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು, ಡ್ರಗ್ಸ್​ ಬಳಕೆ ಇತ್ಯಾದಿ ಅಪರಾಧಗಳು ನಡೆದರೆ, ಕಂಡುಬಂದರೆ ತಣ 112ಗೆ ಕರೆ ಮಾಡಿ, ನೇರವಾಗಿ ನಮಗೆ ಕರೆ ಮಾಡಬಹುದಾಗಿದೆ ಎಂದರು. ನಗರಸಭೆ ಸದಸ್ಯೆ ಪುಣ್ಯವತಿ ಜಯಣ್ಣ ಮಾತನಾಡಿ, ಸಾರ್ವಜನಿಕರು ಪೊಲೀಸ್​ ಇಲಾಖೆಯೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳಬೇಕು. ಸರ್ಕಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ ಎಂದರು. ನಗರ ಠಾಣೆ ಕಾನ್​ಸ್ಟೆಬಲ್​ಗಳಾದ ಕುಮಾರ್​ ನಾಯಕ್​, ಸುಬ್ರಮಣಿ, ಮಂಜುನಾಥ್​, ಹನುಮಂತರಾಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net