ಪಕ್ಷಪಾತ ರಾಜ್ಯಪಾಲ ಗೆಹಲೋತ್ ವಾಪಸ್ ಕರೆಸಿಕೊಳ್ಳಿ: ಈಶ್ವರ ಖಂಡ್ರೆ

Ishwar Khandre
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಾಕಾರಣ ನೋಟಿಸ್ ನೀಡುವ ಮೂಲಕ ಪಕ್ಷಪಾತದಿಂದ ವರ್ತಿಸುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿ ವಾಪಸ್ ಕರೆಸಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಆಗ್ರಹಿಸಿದರು.


ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಮತ್ತು ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಕೆಡವಲು ಯತ್ನಿಸುತ್ತಿದೆ. ಅದು ಯಶಸ್ವಿಯಾಗಲ್ಲ. ಅಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಿನ ಪರಿಣಾಮಗಳಿಗೆ ಬಿಜೆಪಿ, ಕೇಂದ್ರ ಸರ್ಕಾರವೇ ಹೊಣೆ ಎಂದು ಗುಡುಗಿದರು.


ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ಮತ್ತು 7 ಕೋಟಿ ಜನರ ಮೇಲೆ ಪ್ರಹಾರ ಮಾಡುತ್ತಿದೆ. ಅನುದಾನ ನೀಡದೆ ತಾರತಮ್ಯ, ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದರು.


ಬರ ಪರಿಹಾರ, ನೆರೆ ಪರಿಹಾರ, ರಾಜ್ಯಕ್ಕೆ ಪಂಚವಾರ್ಷಿಕ ಯೋಜನೆಯಲ್ಲಿ ಬರಬೇಕಾದ ಅನುದಾನದಲ್ಲೂ ಮೋಸ ಮಾಡುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುವ ಮತ್ತು ನಮ್ಮ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಸ್ಥಿತಿ ಬಂದಿದೆ. ಕೇಂದ್ರದ ವರ್ತನೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಹರಿಹಾಯ್ದರು.


ನಮ್ಮ ಹಲವು ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದರೆ ಅದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕಾರಣ. ಅದು ನಮ್ಮ ರಾಜ್ಯದ ಜನರಿಗೆ ಘೋರ ಅನ್ಯಾಯ ಮಾಡುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದೇ ಹಾಸ್ಯಾಸ್ಪದ ಎಂದರು.


ಆಪರೇಷನ್ ಕಮಲ ಮಾಡಿ ಕರ್ನಾಟಕಕ್ಕೆ ಇದ್ದ ಘನತೆಯನ್ನು ಹಾಳು ಮಾಡಿತು. ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ಜೈಲಿಗೆ ಹೋಗಿದ್ದನ್ನು ಕರ್ನಾಟಕದ ಜನ ನೋಡಿದ್ದಾರೆ. ಇಂತಹ ಪಕ್ಷ ನಮಗೆ ನೀತಿ ಪಾಠ ಹೇಳುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net