ರೇಬೀಸ್ ನಿಯಂತ್ರಣಕ್ಕೆ ಲಸಿಕೆ ಕಡ್ಡಾಯ

rebies
 ದೇವನಹಳ್ಳಿಯ ಪಶು ಆಸ್ಪತ್ರೆ ಆವರಣದಲ್ಲಿ ನಾಯಿಗಳಿಗೆ ರೇಬೀಸ್ ಲಸಿಕೆ ಹಾಕುವ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮುಖ್ಯಪಶುವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಚಂದ್ರಣ್ಣ, ಡಾ.ಪ್ರದೀಪ್, ಡಾ.ಬೈರೇಗೌಡ, ಡಾ.ಶೃತಿ, ವನಿತಾ ಇದ್ದರು.
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನಾಯಿಗಳಿಗೆ ಮಾರಣಾಂತಿಕ ಸೋಂಕು ಹರಡುವ ರೇಬೀಸ್ ಸೋಂಕಿನ ನಿಯಂತ್ರಣಕ್ಕೆ ರೇಬೀಸ್ ಲಸಿಕೆ ಹಾಕಲೇಬೇಕು, ಈ ಹಿನ್ನೆಲೆಯಲ್ಲಿ ಉಚಿತವಾಗಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ತಿಳಿಸಿದರು.

ಜಿಲ್ಲಾ ಪಶುಪಾಲನಾ ಇಲಾಖೆ, ದೇವನಹಳ್ಳಿ ಲಯನ್ಸ್ ಸಂಸ್ಥೆ ಹಾಗೂ ದೇವನಹಳ್ಳಿ ಪುರಸಭೆ ವತಿಯಿಂದ  ದೇವನಹಳ್ಳಿ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ರೇಬೀಸ್ ಲಸಿಕೆ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ತಗಲುವ ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ, ಇದಾದ ಬಳಿಕ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬೀದಿನಾಯಿಗಳಿಗೆ ರೇಬೀಸ್ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ನಂತರದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪ್ರತಿ ಗ್ರಾಮಗಳಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ, ಜಿಲ್ಲಾದ್ಯಂತ ರೇಬೀಸ್ ನಿಯಂತ್ರಣಕ್ಕೆ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಮಾರಣಾಂತಿಕ ಸೋಂಕು: ಆರಂಭದಲ್ಲಿ ರೇಬೀಸ್ ಕಾಯಿಲೆ ಲಕ್ಷಣಗಳು ಬೀದಿ ನಾಯಿಗಳಲ್ಲಿ ಗೋಚರವಾಗುವುದಿಲ್ಲ, ರೇಬೀಸ್ ತಗಲಿದ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಿ ಕಚ್ಚಿದರೆ ಮನುಷ್ಯರಿಗೂ ಸೋಂಕು ಹರಡುತ್ತದೆ, ಇದು ಮಾರಣಾಂತಿಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ಹಾಕುವ ಶಿಬಿರಗಳಿಗೆ ಚಾಲನೆ ನೀಡಲಾಗಿದೆ ಎಂದು ಲಯನ್ಸ್ ಟ್ರಸ್ಟ್ ಅಧ್ಯಕ್ಷ ಚಂದ್ರಣ್ಣ ತಿಳಿಸಿದರು. ನಗರ ಪಟ್ಟಣ ಪ್ರದೇಶಗಳಲ್ಲಿ ಬೀದಿನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಿವೆ, ಬೀದಿನಾಯಿಗಳ ಸಂತಾನಹರಣ ಶಸಚಿಕಿತ್ಸೆ ಕಾರ್ಯಕ್ರಮದ ನಡುವೆಯೂ ಬೀದಿನಾಯಿಗಳ ಜನನ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬೀದಿನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕುವ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಕು ನಾಯಿಗಳ ಬಗ್ಗೆ ಎಚ್ಚರಿಕೆ: ಬಹುತೇಕರು ಮನೆಗಳಲ್ಲಿ ನಾಯಿಗಳನ್ನು ಸಾಕುತ್ತಾರೆ, ಅವುಗಳಿಗೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕು, ಮುಖ್ಯವಾಗಿ ರೇಬೀಸ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಪಶು ವೈದ್ಯಾಧಿಕಾರಿ ಡಾ.ಅನುಪ್‌ಕುಮಾರ್ ತಿಳಿಸಿದರು. ಲಯನ್ಸ್ ಟ್ರಸ್ಟ್, ಪುರಸಭೆ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಉಚಿತ ರೇಬೀಸ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ಇನ್ನಿತರ ಕಡೆಗಳಲ್ಲೂ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಾಕು ನಾಯಿಗಳಿಗೆ ಲಸಿಕೆ: ಪುರಸಭೆ ಸಹಯೋಗದಲ್ಲಿ ದೇವನಹಳ್ಳಿ ಪಟ್ಟಣದಲ್ಲಿನ ಸಾಕಷ್ಟು ಬೀದಿನಾಯಿಗಳಿಗೆ ರೇಬೀಸ್ ಲಸಿಕೆ ಹಾಕಲಾಯಿತು. ಅದೇ ರೀತಿ ಸಾಕು ನಾಯಿಗಳ ಮಾಲೀಕರು ಶಿಬಿರಗಳಲ್ಲಿ ಪಾಲ್ಗೊಂಡು ನಾಯಿಗಳಿಗೆ ಲಸಿಕೆ ಹಾಕಿಸಿದರು. ಪಶು ಇಲಾಖೆ ಅಧಿಕಾರಿಗಳು ರೇಬೀಸ್ ಕಾಯಿಲೆ ಲಕ್ಷಣಗಳು, ಅದರಿಂದಾಗುವ ದುಷ್ಪರಿಣಾಮಗಳು ಹಾಗೂ ಲಸಿಕೆ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸಿದರು.

----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net