ರೇಬೀಸ್ ನಿಯಂತ್ರಣಕ್ಕೆ ಬಿರುಸಿನ ಅಭಿಯಾನ

ra
Published on

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಪ್ರಾಣಿಗಳ ಕಡಿತದಿಂದ ಹರಡುವ ಮಾರಣಾಂತಿಕ ವೈರಸ್‌ನಿಂದ ರಕ್ಷಣೆ ಪಡೆಯಲು ನಿರಂತರ 2 ತಿಂಗಳ ಕಾಲ ಜಿಲ್ಲಾ ಪಶುಪಾಲನಾ ಇಲಾಖೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ, ಜಿಲ್ಲೆಯಲ್ಲಿ ಸುಮಾರು 28 ಸಾವಿರ ಬೀದಿ ನಾಯಿಗಳನ್ನು ಗುರುತಿಸಿದ್ದು, ಇದುವರೆಗೆ 20835 ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಲಾಗಿದೆ. ಅಕ್ಟೋಬರ್ ಅಂತ್ಯದವರೆಗೆ ಅಭಿಯಾನ ಮುಂದುವರೆಯಲಿದ್ದು ಶೇ.100 ಗುರಿ ಮುಟ್ಟಲು ಇಲಾಖೆ ಶ್ರಮಿಸುತ್ತಿದೆ.

ಲೈಸವೈರಸ್: ರೇಬೀಸ್ ಎಂಬುದು ಲೈಸವೈರಸ್‌ನಿಂದ ಉಂಟಾಗುವ ಒಂದು ಮಾರಣಾಂತಿಕ ವೈರಸ್ ಕಾಯಿಲೆಯಾಗಿದ್ದು, ಇದು ಸೋಂಕು ತಗುಲಿದ ಪ್ರಾಣಿಗಳ ಕಡಿತದಿಂದ ಅಥವಾ ಅವುಗಳ ಉಗುರುಗಳಿಂದ ಗೀಚಿದಾಗ ಹರಡುತ್ತದೆ. ರೇಬೀಸ್ ಯಾವಾಗಲೂ ಮಾರಣಾಂತಿಕವಾಗಿದೆ, ಈ ಹಿನ್ನೆಲೆಯಲ್ಲಿ ನಾಯಿಗಳು, ಬೆಕ್ಕು ಮತ್ತಿತರ ಪ್ರಾಣಿಗಳಿಂದ ಈ ಮಾರಣಾಂತಿಕ ಕಾಯಿಲೆಯಿಂದ ರಕ್ಷಣೆ ಪಡೆಯಲು ಲಸಿಕೆ ಹಾಕುವ ಕಾರ್ಯಕ್ರಮವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಮೀತಿ ಮೀರಿದ ಬೀದಿ ನಾಯಿಗಳ ಹಾವಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ, ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಸಾಮಾನ್ಯವಾಗಿದೆ. ಇದರ ವಿರುದ್ಧ ಸಾರ್ವಜನಿಕರು ನಿರಂತವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸ್ಥಳೀಯ ಸಂಸ್ಥೆಗಳು ನಿಸ್ಸಾಹಾಯಕ ಸ್ಥಿತಿಯಲ್ಲಿವೆ ಏತನ್ಯಧ್ಯೆ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಹಾಕುವ ಮೂಲಕ ಭಯಾನಕ ರೋಗ ತಡೆಗೆ ಇಲಾಖೆ ಕಸರತ್ತು ನಡೆಯುತ್ತಿದೆ.

ಉಚಿತ ಲಸಿಕೆ: 21ನೇ ಜಾನುವಾರು ಗಣತಿ ಮಾಹಿತಿ ಪ್ರಕಾರ ಗ್ರಾಮಾಂತರ ಜಿಲ್ಲೆಯಲ್ಲಿ 28 ಸಾವಿರ ನಾಯಿಗಳು ಇವೆ. ಇದರಲ್ಲಿ ಸಾಕು ನಾಯಿಗಳೂ ಸೇರಿವೆ. ಅವುಗಳ ಮೂಲಕ ರೇಬೀಸ್ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ, ಈ ಹಿನ್ನೆಲೆಯಲ್ಲಿ ಸಾಕಿರುವ ನಾಯಿಗಳಿಗೆ ಸಮೀಪದ ಪಶು ಚಿಕಿತ್ಸಾಲಯಗಳಲ್ಲಿ ಲಸಿಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೀದಿ ನಾಯಿಗಳಿಗೆ ಸ್ಥಳೀಯ ಆಡಳಿತದ ಸಹಕಾರದಿಂದ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ. ಬೀದಿನಾಯಿಗಳನ್ನು ಹಿಡಿಯುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾದರೆ ಹಿಡಿದಂತ ನಾಯಿಗಳಿಗೆ ಉಚಿತವಾಗಿ ಲಸಿಕೆ ಹಾಕುವುದು ಪಶುಪಾಲನ ಇಲಾಖೆ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ, ನಗರಸಭೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ಚುರುಕುಗೊಳಿಸಲಾಗಿದೆ.

ಜಾಗೃತಿ ಕಾರ್ಯಕ್ರಮ: ಜಿಲ್ಲಾ ಪಶುಪಾಲನ ಇಲಾಖೆ ವತಿಯಿಂದ ಲಸಿಕಾ ಅಭಿಯಾನದ ಜತೆಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡುವ ಸಿಬ್ಬಂದಿ ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ನಾಯಿ ಕಚ್ಚಿದರೆ ಏನು ಮಾಡಬೇಕು? ನಾಯಿ ಕಡಿತದಿಂದಾಗುವ ಸಮಸ್ಯೆ ಏನು? ನಾಯಿ ಕಡಿದರೆ ಯಾವ ರೀತಿ ಚಿಕಿತ್ಸೆ ಪಡೆಯಬೇಕು? ಚಿಕಿತ್ಸೆ ಎಲ್ಲಿ ಲಭ್ಯವಾಗುತ್ತದೆ ಸೇರಿ ನಾಯಿ ಕಡಿತವನ್ನು ನಿರ್ಲಕ್ಷ್ಯ ಮಾಡಬಾರದು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ರೇಬೀಸ್ ಪ್ರಾಣಿಗಳಿಂದ ಹರಡುವ ಮಾರಣಾಂತಿಕ ಕಾಯಿಲೆಯಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 2 ತಿಂಗಳು ಸತತ ಉಚಿತವಾಗಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾಕು ನಾಯಿಗಳು ಹಾಗೂ ಬೀದಿ ನಾಯಿ ಹಾಗೂ ಬೆಕ್ಕುಗಳಿಗೂ ಲಸಿಕೆ ಹಾಕಲಾಗುತ್ತಿದೆ ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದಿಂದ ಇದುವರೆಗೆ 20 ಸಾವಿರಕ್ಕೂ ಹೆಚ್ಚು ಲಸಿಕೆ ಹಾಕಲಾಗಿದ್ದು ಶೇ.100 ಗುರಿಮುಟ್ಟಲು ಶ್ರಮಿಸಲಾಗುತ್ತಿದೆ.

ಡಾ. ಜಗದೀಶ್, ಉಪನಿರ್ದೇಶಕ ಪಶುಪಾಲನೆ ಇಲಾಖೆ, ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net