

ಬೆಂಗಳೂರು: ಜಾಗ ಖರೀದಿ ಮಾಡುತ್ತೇನೆ ಎಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ ವಿದೇಶಿ ಮಹಿಳೆ 2.5 ಲಕ್ಷ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್ಬುಕ್ ಮುಖಾಂತರವೇ ವ್ಯವಹಾರ ನಡೆದಿದ್ದು ಇದೀಗ ಉದ್ಯಮಿ ತನ್ನ ಹಣವನ್ನು ವಾಪಸು ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.
ಕಲ್ಯಾಣನಗರದ ನಿವಾಸಿ ಅರುಣ್ ಕುಮಾರ್ ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದಾನೆ. ಕಳೆದ ವರ್ಷ ಆತ ಲಂಡನ್ನ ಇಸಾಬುಲ್ಲಾ ಹೆಸರಿನ ಮಹಿಳೆಯೊಂದಿಗೆ ಫೇಸ್ಬುಕ್ನಲ್ಲಿ ಗೆಳೆತನ ಬೆಳೆಸಿದ್ದ. ಇತ್ತೀಚೆಗೆ ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕೋಟಿ ಮೌಲ್ಯದ 25 ಎಕರೆ ಜಾಗವನ್ನು ಖರೀದಿಸುವುದಾಗಿ ತಿಳಿಸಿದ ಆಕೆ ಅದಕ್ಕೆ ಆತನ ಸಹಾಯವನ್ನು ಕೇಳಿದ್ದಾಳೆ. ಅರುಣ್ ಕುಮಾರ್ ಸಹಕರಿಸುವುದಾಗಿ ಹೇಳಿದ ನಂತರ ಆತನಿಗೆ ರಿಸರ್ವ್ ಬ್ಯಾಂಕ್ನ ಒಂದಿಷ್ಟು ಅರ್ಜಿಗಳನ್ನು ಮೇಲ್ ಮಾಡಿ ಅದಕ್ಕೆ ಸಹಿ ಹಾಕುವಂತೆ ಕೇಳಿದ್ದಾಳೆ. ಹಾಗೆಯೇ ಆತನ ಬ್ಯಾಂಕ್ ಡೀಟೆಲ್ಸ್ ನೀಡುವಂತೆ ಕೇಳಿದ್ದಾಳೆ. ಅದಾದ ಮೇಲೆ, ಕಸ್ಟಮ್ಸ್ ಡ್ಯೂಟಿಗೆಂದು 2.5ಲಕ್ಷ ಹಣವನ್ನು ಕಟ್ಟುವಂತೆ ಹೇಳಿದ್ದಾಳೆ. ಈತ ಹಣವನ್ನು ಪಾವತಿಸಿದ ನಂತರ ಆಕೆ ಈತನ ಜತೆಗೆ ಸಂಪರ್ಕ ಕಡಿತಗೊಳಿಸಿಕೊಂಡಿದ್ದು ಫೇಸ್ಬುಕ್ನಿಂದಲೂ ಮಾಯವಾಗಿದ್ದಾಳೆ.
ವಂಚನೆಯಿಂದಾಗಿ ಆಘಾತಗೊಂಡಿರುವ ಅರುಣ್ ಕುಮಾರ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. (ಏಜೆನ್ಸೀಸ್)