ವೃತ್ತಿ ಜೀವನದಲ್ಲಿ ಗುರುವಿನ ಶ್ರೇಷ್ಠತೆ ಅರಿವು

29 SARAG 2
ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು. ವಸಂತಾ ಸಣ್ಣಪ್ಪ ನಾಯಕ, ಅನಿಲ್‌ಕುಮಾರ್ ಕೆ.ಬಿದರ್, ಸಿ.ವಿ.ರವಿಂದ್ರ, ದುಂಡಪ್ಪ, ನಿಂಗಣ್ಣ, ತ್ರೀವೇಣಿ, ಎಂ.ಬಿ.ಸೂರ್ಯವಂತಿ ಇದ್ದರು.
Published on

ಸರಗೂರು: ಶಾಲೆಯ ಹಳೆಯ ನೆನಪುಗಳು ಪರಿಶ್ರಮ, ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕರೂ ಆದ ಸೋಮಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಸಾಗರೆ ಗ್ರಾಮದ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ. ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಎಂದರು.

ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರ ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದ್ದೇವೆ. ಗುರುಗಳು ನಮ್ಮ ಪಾಲಿಗೆ ದೇವರಿದ್ದಂತೆ. ಇಂದಿನ ಯುವ ಪೀಳಿಗೆ ಗುರುಗಳ ಮಾರ್ಗದಲ್ಲಿ ನಡೆದಾಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ನಿವೃತ್ತ ಶಿಕ್ಷಣಾಧಿಕಾರಿ ಎಸ್.ಪಿ. ಶಿವಕುಮಾರ್ ಮಾತನಾಡಿ, ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ. ಹಾಗಾಗಿ ಈ ಸಮಾಜದಿಂದ ಪಡೆದದ್ದನ್ನು ನಾವು ಮತ್ತೆ ಸಮಾಜಕ್ಕೆ ವಾಪಸ್ ನೀಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲೇಬೇಕು. ಸುಮಾರು 30 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾದರಿಯಾಗಿದೆ. ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಉತ್ತಮ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿ, ಹುಣಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಗರೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಸುಮಾರು 70 ಶಿಕ್ಷಕರಿಗೆ ಗುರುಗಳನ್ನು ಆಹ್ವಾನಿಸಿ ಸನ್ಮಾನಿಸಲಾಯಿತು.

ಜನಪದ ಗಾಯಕ ಅಮ್ಮ ರಾಮಚಂದ್ರ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಗರೆ ಗ್ರಾಮದ ಕವಿ ಸೂರಿ ತಂಡದಿಂದ ಗುರುಗಳ ಶ್ರೇಷ್ಠತೆ ಕುರಿತ ಹಾಡುಗಳ ಗಾಯನ ಜರುಗಿತು.

ಗ್ರಾಪಂ ಅಧ್ಯಕ್ಷೆ ವಸಂತಾ ಸಣ್ಣಪ್ಪ ನಾಯಕ, ಉಪನ್ಯಾಸಕ ಅನಿಲ್‌ಕುಮಾರ್ ಕೆ.ಬಿದರ್, ಶಿಕ್ಷಕ ಸಿ.ವಿ.ರವಿಂದ್ರ, ದುಂಡಪ್ಪ, ನಿಂಗಣ್ಣ,ತ್ರೀವೇಣಿ, ಎಂ.ಬಿ.ಸೂರ್ಯವಂತಿ, ಚನ್ನಮಲ್ಲಸ್ವಾಮಿ, ಜಯರಾಂ, ದೇವರಾಜು, ಎಸ್. ಆರ್.ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net