ಜವಾಬ್ದಾರಿ ಅರಿತು ನ್ಯಾಯ ನೀಡಿ

LNG Court
ಲಿಂಗಸುಗೂರಿನಲ್ಲಿ ನ್ಯಾಯಾಲಯಗಳ ಸಂಕೀರ್ಣ, ವಕೀಲರ ಭವನ, ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿಗೃಹ ಉದ್ಘಾಟನೆ ಮತ್ತು ಇ-ಸೇವಾ ಕೇಂದ್ರ ಕಟ್ಟಡ ಕಾಮಗಾರಿಗೆ ಹೈಕೋರ್ಟ್ ಮುಖ್ಯನ್ಯಾಯಾಧೀಶ ಎನ್.ವಿ.ಅಂಜಾರಿಯಾ ಚಾಲನೆ ನೀಡಿದರು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಶಿವರಾಜ ಪಾಟೀಲ್, ಹೈಕೋರ್ಟ್ ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶೆ ಎಂ.ಜಿ.ಉಮಾ, ಜಿಲ್ಲಾ ನ್ಯಾಯಾಧೀಶ ಮಾರುತಿ ಎಸ್.ಬಗಾದೆ, ಶಾಸಕ ಮಾನಪ್ಪ ವಜ್ಜಲ್ ಇತರರಿದ್ದರು.
Published on

ಲಿಂಗಸುಗೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗದ ಜತೆಗೆ ನ್ಯಾಯಾಂಗ ಇಲಾಖೆಯೂ ಒಂದಾಗಿದೆ. ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹೇಳಿದರು.

ಪಟ್ಟಣದಲ್ಲಿ ಶನಿವಾರ ನೂತನ ನ್ಯಾಯಾಲಯಗಳ ಸಂಕೀರ್ಣ, ವಕೀಲರ ಭವನ, ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿಗೃಹ ಉದ್ಘಾಟನೆ ಮತ್ತು ಇ-ಸೇವಾ ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರಾಯಚೂರು ಜಿಲ್ಲೆ ತನ್ನದೇ ಇತಿಹಾಸ ಹೊಂದಿದೆ. ಅದರಲ್ಲೂ ಲಿಂಗಸುಗೂರು ತಾಲೂಕು ರಾಷ್ಟ್ರಕೂಟರು, ಚಾಲುಕ್ಯರು ಮತ್ತು ಕರಡಕಲ್ ಬಿಲ್ಲಮರಾಜನ ಆಳ್ವಿಕೆಗೆ ಒಳಪಟ್ಟ ಚರಿತ್ರೆ ಹೊಂದಿದೆ. ಅಶೋಕನ ಶಿಲಾಶಾಸನ ಮಸ್ಕಿಯಲ್ಲಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಜಿಲ್ಲಾ ಕೇಂದ್ರವಾಗಿ ಆಡಳಿತ ನಡೆಸಿದ ಇತಿಹಾಸ ಲಿಂಗಸುಗೂರಿಗಿದೆ. ಇಂತಹ ಇತಿಹಾಸ ಪ್ರಸಿದ್ಧ ನಗರದಲ್ಲಿ ನ್ಯಾಯಾಲಯಗಳ ಸಂಕೀರ್ಣದ ನೂತನ ಸುಸಜ್ಜಿತ ಕಟ್ಟಡ, ಕೋರ್ಟ್ ಹಾಲ್, ವಕೀಲರ ಭವನ, ವಸತಿ ಗೃಹಗಳು ನಿರ್ಮಿಸಿರುವುದು ಸಂತಸ ತಂದಿದೆ.

ಶೀಘ್ರ ಹೊಸ ನ್ಯಾಯಾಲಯದಲ್ಲಿ ಕೋರ್ಟ್ ಕಾರ್ಯಕಲಾಪ ನಡೆಸುವ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇ-ಸೇವಾ ಕೇಂದ್ರ ಕಟ್ಟಡ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಂಡು ಸೇವೆ ನೀಡಲಿದೆ. ಜಿಲ್ಲಾ-ತಾಲೂಕು ನ್ಯಾಯಾಲಯಗಳಿಗೆ ಹೈಕೋರ್ಟ್ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಆಸ್ಪತ್ರೆ ಮತ್ತು ನ್ಯಾಯಾಲಯಗಳು ಪ್ರೇಕ್ಷಣೀಯ, ಮನೋರಂಜನೆ ಮತ್ತು ಪಿಕ್‌ನಿಕ್ ಸ್ಥಳಗಳಲ್ಲ. ಸಾರ್ವಜನಿಕರು ನೋವನ್ನು ಪರಿಹರಿಸಿಕೊಳ್ಳಲು ಬರುವ ಕೇಂದ್ರಗಳಾಗಿವೆ. ನೋವಿನಿಂದ ಬಳಲುವವರಿಗೆ ಚಿಕಿತ್ಸೆ ಮತ್ತು ನ್ಯಾಯ ದೊರಕಿಸಿ ಕೊಡುವ ಪವಿತ್ರ ಕೇಂದ್ರಗಳಾಗಿವೆ. ನ್ಯಾಯಾಧೀಶರು ಮತ್ತು ವಕೀಲರು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಬದ್ಧತೆ ಹೊಂದಿರಬೇಕು. ಮಾನವೀಯತೆ ಹೊಂದಿದ್ದರೆ ಮಾತ್ರ ಉತ್ತಮ ನ್ಯಾಯಾಧೀಶನೆಂದು ಗುರುತಿಸಿಕೊಳ್ಳಲು ಸಾಧ್ಯವಿದೆ. ನರಳುತ್ತ ಬರುವ ಜನರು ನಗುತ್ತ ಹೊರಗೆ ಹೋಗುವಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವುದೇ ಆಸ್ಪತ್ರೆ ಮತ್ತು ನ್ಯಾಯಾಲಯಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಯೊಂದಿಗೆ, ವಿಶೇಷ ಅನುದಾನ ನೀಡುತ್ತಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇಲಾಖೆಗಳು ಸಾರ್ವಜನಿಕರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಹೈಕೋರ್ಟ್ ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶೆ ಎಂ.ಜಿ.ಉಮಾ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಎಸ್.ಬಗಾದೆ, ಶಾಸಕ ಮಾನಪ್ಪ ವಜ್ಜಲ್, ಎಂಎಲ್ಸಿಗಳಾದ ಶರಣಗೌಡ ಪಾಟೀಲ್ ಬಯ್ಯಪುರ, ಎ.ವಸಂತ ಕುಮಾರ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಅಂಬಣ್ಣ, ಲಿಂಗಸುಗೂರು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಡಿಸಿ ಕೆ.ನಿತೀಶ್, ಎಸ್ಪಿ ಪುಟ್ಟಮಾದಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net