ಬೈಂದೂರು: ಜೀವನದಲ್ಲಿ ಮೋಕ್ಷ ಸಾಧನೆ ಪಡೆಯುವುದೇ ಪ್ರಧಾನ ಅಂಶವಾಗಿದ್ದು, ಮೋಕ್ಷ ಸಾಧನೆಗೆ ಭಗವಂತನ ಸಾಕ್ಷಾತ್ಕಾರ ಆಗಬೇಕಾಗಿದೆ. ಇದಕ್ಕೆ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ದೇಶ ಸುತ್ತುವುದರೊಂದಿಗೆ ಜೀವನದ ಅನುಭವವು ಮೋಕ್ಷ ಸಾಧಿಸಲು ಸಾಧ್ಯ ಎಂದು ವಿದ್ವಾನ್ ಮಂಜುನಾಥ ಭಟ್ ಹರೆಗೋಡು ಹೇಳಿದರು. ಕಿರಿಮಂಜೇಶ್ವರದ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ಶ್ರಾವಣ ಸಂಧ್ಯಾ ಕಾರ್ಯಕ್ರಮ, ಕಾಶಿ ಸಮಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹುಟ್ಟಿನಿಂದ ಯಾರು ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಶೋಡಷಕರ್ಮ ನೀಡಿ, ವೇದಗಳ ಅಧ್ಯಯನದ ಮೂಲಕ ಎಲ್ಲಾ ವಿದ್ಯೆ ಕಲಿತು ಸಂಸ್ಕಾರ ಪಡೆದಿದ್ದರೆ ಮಾತ್ರ ಬ್ರಾಹ್ಮಣನಾಗುತ್ತಾನೆ ಎಂದರು. ನಿವೃತ್ತ ಉಪನ್ಯಾಸಕ ಕೊಡೇರಿ ವಾಸುದೇವ ಕಾರಂತ್ ಉದ್ಘಾಟಿಸಿದರು. ಉಪ್ಪುಂದ ವಲಯಾದ್ಯಕ್ಷ ಯು.ಸಂದೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್ ಕುಂಭಾಶಿ, ತಾಲೂಕು ಉಪಾಧ್ಯಕ್ಷ ಬಿ.ಗಣೇಶ ಮಯ್ಯ, ಗೌರವಾಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಪ್ರಶಾಂತ ಮಯ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್, ಯುವ ವೇದಿಕೆ ಅಧ್ಯಕ್ಷ ಪದ್ಮನಾಭ ಹೆಬ್ಬಾರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ದೀಟಿ ಸೀತಾರಾಮ ಮಯ್ಯ ಸ್ವಾಗತಿಸಿದರು. ಸುಮಾ ಶ್ಯಾನುಭೋಗ್ ಪ್ರಾರ್ಥಿಸಿದರು. ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಮಹಿಳಾ ವೇದಿಕೆ ಅವರಿಂದ ವಿಷ್ಣು ಸಹಸ್ರನಾಮ ಪಠಣ, ಕಾಶಿಯಿಂದ ತಂದ ಗಂಗಾಜಲದ ಪೂಜೆ, ಅಪರಾಹ್ನ ಭಜನೆ, ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.