ಜನರು, ಅದರಲ್ಲೂ ಮಕ್ಕಳನ್ನು ಹಾಳು ಮಾಡುತ್ತಿರುವ ರಿಯಾಲಿಟಿ ಶೋಗಳು

IMG_20250711_191445.jpg
Published on

ಚಿಕ್ಕಬಳ್ಳಾಪುರ: ಪರಂಪರೆಯ ಮೂಲಸತ್ವ, ನಡೆದು ಬಂದ ಹಾದಿ, ಊರು ಕೇರಿಗಳ ಪರಿಚಯದ ಬದಲಿಗೆ ಮಿತಿ ಮೀರಿದ ಮೊಬೈಲ್‌ ಬಳಕೆ, ರಿಯಾಲಿಟಿ ಶೋಗಳ ಆಸಕ್ತಿ ಬೆಳೆಸುವ ಮೂಲಕ ಮಕ್ಕಳನ್ನು ದಾರಿ ತಪ್ಪಿಸುವಂತಹ ಧೋರಣೆ ಹೆಚ್ಚಳವು ದುರದೃಷ್ಟಕರ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಪ್ರಸಾದ್ ಬೇಸರಿಸಿದ್ದಾರೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಕೈಗೊಂಡಿದ್ದ ಸಾಂಸ್ಕೃತಿಕ ಚಿಂತನಾ ಸಮಾಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಆಧುನಿಕತೆಯ ತಂತ್ರಜ್ಞಾನಯ ದುಷ್ಪರಿಣಾಮವು ವಿಸ್ಮೃತಿಗೆ ತಳ್ಳುವ ಅಪಾಯವಿದೆ. ರಿಯಾಲಿಟಿ ಶೋಗಳ ಹುಸಿ ಭ್ರಮೆಯ ಗೀಳಿಗೆ ಒಳಗಾದ ಪಾಲಕರು ಕೈಯಾರೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ನೀತಿಕತೆಗಳ ಮೂಲಕ ಲೋಕ ಜ್ಞಾನ, ಮೌಲ್ಯವನ್ನು ಪರಿಚಯುತ್ತಿದ್ದ ಅಜ್ಜ ಅಜ್ಜಂದಿರ ಬಾಂಧವ್ಯ ಅನುಭವದ ಪರಂಪರೆ ಬೆಳೆಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಬುದ್ಧ ಬಸವ, ಕೈವಾರ ತಾತಯ್ಯ ಅಂಬೇಡ್ಕರ್ ನಡೆದಾಡಿದ ನೆಲದಲ್ಲಿ ಸಮತೆಯ ಬದಲಿಗೆ ಸಂಘರ್ಷ ತಲೆಯೆತ್ತಿದೆ. ಇದರ ಬದಲಿಗೆ ದೇವನೊಬ್ಬ ನಾಮ ಹಲವು ಎಂಬಂತೆ ಕುವೆಂಪುರ ವಿಶ್ವಮಾನನ ಸಂದೇಶಕ್ಕೆ ಜೀವತುಂಬಬೇಕು. ಮನುಜ ಮತವನ್ನು ಉಸಿರಾಗಿಸಿಕೊಂಡು ವಿಶ್ವಪಥದತ್ತ ಸಾಗಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರು ಉತ್ತರ ವಿ.ವಿ.ಕುಲಸಚಿವ ಎನ್.ಲೋಕನಾಥ್ ಮಾತನಾಡಿ‌, ಒತ್ತಡ ರಹಿತ ಜೀವನದಲ್ಲಿ ಮನುಷ್ಯ ಹಲವು ಸಂಕಷ್ಟ, ಸಮಸ್ಯೆಗಳೀಡಾಗುತ್ತಿದ್ದಾನೆ. ಎಲ್ಲವೂ ಇದ್ದರೂ ತೃಪ್ತಿ ಇಲ್ಲ, ಇರುವುದರಲ್ಲಿ ನೆಮ್ಮದಿಯಿಂದ ಬದುಕುವ ಭಾವನೆ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇಂತಹ ಧೋರಣೆಯು ಬದಲಾಗಬೇಕು. ಯೋಗ ಧ್ಯಾನ, ಉತ್ತಮ ಹವ್ಯಾಸಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.

ಗುರು ಪೂರ್ಣಿಮೆ ಅಂಗವಾಗಿ ಭಗವಾನ್‌ ಬುದ್ಧನ ಸ್ಮರಣೆ, ಸರ್ವಜ್ಞನ ವಚನಗಳು, ಕುವೆಂಪು ಹಾಗೂ ಅಂಬೇಡ್ಕರ್‌ ಸಂದೇಶ ತತ್ವಗಳ ವಿಚಾರವನ್ನು ಪತ್ರಕರ್ತ ಮುನಿರಾಜು ಎಂ ಅರಿಕೆರೆ ತಿಳಿಸಿದರು.  ಹಿರಿಯ ಪತ್ರಕರ್ತರಾದ ಭವಾನಿ ಲಕ್ಷ್ಮೀ ನಾರಾಯಣ್, ಪುಟ್ಟರಾಜು, ಟಿ.ಎಸ್.ನಾಗೇಂದ್ರಬಾಬುರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ರಾಜ್ಯಸಮಿತಿ ಸದಸ್ಯ ಎನ್.ವೆಂಕಟೇಶ್, ಖಜಾಂಚಿ ರವಿಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net