ಜೆಜೆಎಮ್ ಕಾಮಗಾರಿಯ ರಿಯಾಲಿಟಿ ಚೆಕ್, ಸಿಇಒ ರಿಷಿ ಆನಂದ ಆನಂದ ಕಂಡಿದ್ದೇನು ?

ZP CEO VISIT JJM SCHEAM
ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಿಇಒ ರಿಷಿ ಆನಂದ ಜೆಜೆಎಂ ಕಾಮಗಾರಿ ಪರಿಶೀಲಿಸಿದರು. ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ಭೀಮಾಶಂಕರ ಕನ್ನೂರ, ತಾರನಾಥ್ ರಾಠೋಡ ಮತ್ತಿತರರಿದ್ದಾರೆ.
Published on

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿರುವ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಸ್ಥಳೀಯರಿಂದ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸಿದರು.

ಶನಿವಾರ ಸಿಂದಗಿ, ಆಲಮೇಲ, ಇಂಡಿ, ನಾಗಠಾಣ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರಲ್ಲದೇ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಸ್ಥಳೀಯರಿಂದ ಖಚಿತಪಡಿಸಿಕೊಂಡರು.

ಸಿಂದಗಿ ತಾಲೂಕಿನ ರಾಂಪುರ ಪಿಎ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಪಿಎ ಮತ್ತು ಗಣಿಹಾರ ಗ್ರಾಮ ಹಾಗೂ ಆಲಮೇಲ ತಾಲೂಕಿನ ಕೋರಹಳ್ಳಿ, ಹೂವಿನಹಳ್ಳಿ ಹಾಗೂ ವಿಭೂತಿಹಳ್ಳಿ ಗ್ರಾಮ ಮತ್ತು ಇಂಡಿ ತಾಲೂಕಿನ ಮರಸನಹಳ್ಳಿ, ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರ, ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ ಮತ್ತು ಹಳಗುಣಕಿ ಮತ್ತು ಹೊರ್ತಿ ಗ್ರಾಮಗಳಲ್ಲಿ ಸಂಚರಿಸಿ, ಪ್ರತಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಡಿ ಅನುಷ್ಟಾನಗೊಂಡ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ನೀರು ಪೂರೈಕೆಗೂ ಮುನ್ನ ನಿಯಮಿತವಾಗಿ ಪರೀಕ್ಷಿಸಲು ಹಾಗೂ ಒಎಚ್‌ಟಿ ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಹಾಗೂ ಕ್ಲೋರಿನೇಷನ್ ಮಾಡಲು ಸ್ಥಳೀಯ ಪಿಡಿಒಗಳಿಗೆ ಹಾಗೂ ಸಂಬಂಧ ಪಟ್ಟ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರತಿ ಮನೆಗೆ ನೀರು ಸರಿಯಾದ ಪ್ರಮಾಣದಲ್ಲಿ ಬರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಅದನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಸೂಚಿಸಿದರು. ಗ್ರಾಮ ಪಂಚಾಯಿತಿಗೆ ಈ ಯೋಜನೆ ಹಸ್ತಾಂತರಗೊಂಡ ನಂತರ ಯೋಜನೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂದು ಸ್ಥಳದಲ್ಲಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಳವಡಿಸಿರುವ ಎಎಒ ಕಾಮಗಾರಿ ವೀಕ್ಷಿಸಿ ಕಾರ್ಯಾತ್ಮಕ ನಳ ಸಂಪರ್ಕ ಪರಿಶೀಲನೆ ಮಾಡಿದರು. ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಸಿಸಿ ರಸ್ತೆ ಕಾಮಗಾರಿ, ಗ್ರಾಮಗಳಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿ, ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ವಹಿಸಿ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ನಳ ಸಂಪರ್ಕ ಒದಗಿಸಿ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಭೀಮಾಶಂಕರ ಕನ್ನೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ್ ರಾಠೋಡ, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ, ನಿತ್ಯಾನಂದ ಯಲಗೋಡ, ಆರ್.ಎಸ್. ಬಂಡಿ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಶಿಧರ್ ಮೆಡೆದಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಮೇಶ ಜಾನಮಟ್ಟಿ, ಅಮಸಿದ್ದ ಹರಿಜನ ಮತ್ತು ಪ್ರಭಾವತಿ ಕುಂಬಾರ, ಮುತ್ತಪ್ಪ ಜಾಡರ, ಶ್ರೀಶೈಲ ಬಿರಾದಾರ, ಸಿದರಾಯ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net