

ಬೆಂಗಳೂರು: ಲಾಕ್ಡೌನ್ ಆದೇಶದಿಂದ ಲಕ್ಷಾಂತರ ಕೂಲಿ ಕಾರ್ವಿುಕರು, ನಿರ್ಗತಿಕರು ಆಹಾರವಿಲ್ಲದೆ ಬಳಲುವುದನ್ನು ತಪ್ಪಿಸಲು ಇಂದಿರಾ ಕ್ಯಾಂಟೀನ್ನಿಂದ ನಿತ್ಯ 2.13 ಲಕ್ಷ ಮಂದಿಗೆ ಊಟ ಒದಗಿಸಲಾಗುತ್ತಿದೆ. ಇದರಿಂದ ಜನ ನೆಮ್ಮದಿಯಾಗಿ ಮೂರು ಹೊತ್ತು ಉಚಿತವಾಗಿ ಊಟ ಮಾಡುವಂತಾಗಿದೆ.
ರಾಜ್ಯ ಸರ್ಕಾರ ಮಾ.23 ರಿಂದ ಮಾ.31ರವರೆಗೆ ಲಾಕ್ಡೌನ್ ಹೇರಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಾ.25 ರಿಂದ 21 ದಿನ ಲಾಕ್ಡೌನ್ ಹೇರಿ
ಯಾರ್ಯಾರಿಗೆ ಕ್ಯಾಂಟೀನ್ ಊಟ: ಉಚಿತ ಊಟ ಎಂದಾಕ್ಷಣ ಎಲ್ಲರೂ ಊಟಕ್ಕೆ ಬಂದು ನಿಲ್ಲುತ್ತಿಲ್ಲ. ನಿರಾಶ್ರಿತರು, ಬಡವರು, ಕೂಲಿ ಕಾರ್ವಿುಕರು ಇಂದಿರಾ ಕ್ಯಾಂಟೀನ್ ಬಳಿ ಬಂದು ಊಟ ಪಡೆದುಕೊಳ್ಳುತ್ತಿದ್ದಾರೆ. ಲಾಕ್ಡೌನ್ ಆದೇಶದಿಂದ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9 ನಿರಾಶ್ರಿತರ ಕೇಂದ್ರಗಳು, ಬೌರಿಂಗ್ ಆಸ್ಪತ್ರೆ ಸೇರಿ ಕೆಲವು ಸರ್ಕಾರಿ ಆಸ್ಪತ್ರೆಗಳು, ತಾತ್ಕಾಲಿಕ ನಿರಾಶ್ರಿತರ ಕೇಂದ್ರಗಳು ಹಾಗೂ ಹಾರ ಸಹಾಯವಾಣಿಗೆ ಕರೆ ಮಾಡಿ ಊಟಕ್ಕೆ ನೆರವಾಗುವಂತೆ ಕರೆ ಮಾಡುವ ಕೂಲಿ ಕಾರ್ವಿುಕರಿಗೆ ಇಂದಿರಾ ಕ್ಯಾಂಟೀನ್ನಿಂದ ಊಟವನ್ನು ಸರಬರಾಜು ಮಾಡಲಾಗುತ್ತಿದೆ.
ಅನ್ನದ ದೇವಾಲಯ: ಮೂರು ವರ್ಷದ ಹಿಂದೆ ಆಸ್ಪತ್ರೆಗೆ ಸೇರಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದೆ. ಆದರೆ, ದುಡಿದ ಹಣವನ್ನೆಲ್ಲಾ ಚಿಕಿತ್ಸೆಗಾಗಿ ಖರ್ಚು ಮಾಡಿ ಬೀದಿಗೆ ಬಂದಿ ದ್ದೇನೆ. ಒಂದೂವರೆ ವರ್ಷದಿಂದ ಕೆ.ಆರ್. ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕೆಲಸ, ಭಿಕ್ಷಾಟನೆ ಮಾಡುತ್ತಾ ಇಂದಿರಾ ಕ್ಯಾಂಟೀನ್ ಊಟ ಪಡೆಯುತ್ತಿದೆ. ಈಗ ಲಾಕ್ಡೌನ್ನಿಂದ 2 ದಿನ ಊಟವಿಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದೆ. ನನ್ನಂಥ ನೂರಾರು ನಿರಾಶ್ರಿತರಿಗೆ ಊಟ, ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್ ನಮ್ಮ ಪಾಲಿಗೆ ಅನ್ನ ನೀಡುವ ದೇವಾಲಯ ಆಗಿದೆ ಎಂದು ನಿರಾಶ್ರಿತ ವ್ಯಕ್ತಿ ವೆಂಕಟೇಶ್ ಹೇಳುತ್ತಾರೆ.
2.13 ಲಕ್ಷ ಊಟ ವಿತರಣೆ!: ಇಂದಿರಾ ಕ್ಯಾಂಟೀನ್ನಲ್ಲಿ ಮಾ.25ರಿಂದ ಉಚಿತ ಊಟ ಆರಂಭವಾದಾಗ 87 ಕ್ಯಾಂಟೀನ್ಗಳ ಬಳಿ ಒಟ್ಟು 92 ಸಾವಿರ ಊಟಗಳನ್ನು ನೀಡಲಾಯಿತು. ಮಾ. 28ಕ್ಕೆ 160 ಕ್ಯಾಂಟೀನ್ಗಳ ಬಳಿ 1.75 ಲಕ್ಷ ಊಟಗಳನ್ನು ಆಹಾರ ಪೊಟ್ಟಣಗಳಾಗಿ ಮಾಡಿ ವಿತರಣೆ ಮಾಡಲಾಯಿತು. ಮಾ.30ರಿಂದ ಉಚಿತ ನೀಡುವ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಮೂರು ಅವಧಿಗೆ ಸೇರಿ 2.13 ಲಕ್ಷ ಉಚಿತ ಊಟದ ಪೊಟ್ಟಣ ನೀಡಲಾಗುತ್ತಿದೆ.
ಶಿಸ್ತಿನ ಸಾಲು: ಇಂದಿರಾ ಕ್ಯಾಂಟೀನ್ನೊಳಗೆ ಯಾರಿಗೂ ಪ್ರವೇಶವಿಲ್ಲ. ಹೊರಭಾಗದಲ್ಲಿ 3 ಅಡಿಗೆ ಒಂದರಂತೆ ಜಾಗ ಗುರುತು ಮಾಡಿದ್ದು, ಆಹಾರ ಪಡೆಯಬಯಸುವ ಎಲ್ಲರನ್ನು ಮಾರ್ಷಲ್ಗಳು ಅದರಲ್ಲಿ ನಿಲ್ಲಿಸಿ ಊಟದ ಪೊಟ್ಟಣ ವಿತರಿಸುತ್ತಾರೆ. ಬೆಳಗ್ಗೆ 8.30, ಮಧ್ಯಾಹ್ನ 12.30 ಹಾಗೂ ರಾತ್ರಿ 7.30 ಕ್ಕೆ ಊಟ ನೀಡಲಾಗುತ್ತದೆ. ಕರೊನಾ ಸೋಂಕು ಭೀತಿಯಿದ್ದರೂ, ಹಸಿವು ಸರತಿ ಸಾಲಿನಲ್ಲಿ ನಿಲ್ಲುವ ಶಿಸ್ತು ಕಲಿಸಿದೆ.
ವರ್ಕ್ಶಾಪ್ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೆ, ಬಂದ ಹಣದಲ್ಲಿ ಊಟ ಮಾಡುತ್ತಿದ್ದೆ. ಆದರೆ, ಈಗ ಕೆಲಸವೂ ಇಲ್ಲ, ಊಟವೂ ಇಲ್ಲ ಎನ್ನುವಂತಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್ ಉಚಿತ ಊಟದಿಂದ ನಮ್ಮ ಹೊಟ್ಟೆ ತುಂಬುತ್ತಿದೆ. | ಚಂದ್ರಶೇಖರ್
ನಾನು ಮೊದಲು ಇಂದಿರಾ ಕ್ಯಾಂಟೀನ್ ಊಟ ಮಾಡುತ್ತಿರಲಿಲ್ಲ. ಆದರೆ, ಲಾಕ್ಡೌನ್ನಿಂದ ಯಾವುದೇ ಹೋಟೆಲ್, ಅಂಗಡಿಗಳು ತೆರೆದಿಲ್ಲ. ಹಾಗಾಗಿ ಕ್ಯಾಂಟೀನ್ ಊಟದ ಮೇಲೆ ಅವಲಂಬಿತನಾಗಿದ್ದೇನೆ. ರುಚಿಯಾದ, ಗುಣಮಟ್ಟದ ಊಟ ಸಿಗುತ್ತಿದೆ. | ಅನ್ಸರ್ ಶಿವಾಜಿನಗರ ನಿವಾಸಿ
ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತೇನೆ. ಈಗ ಮನೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಊರಿಗೆ ಹೋಗಿದ್ದಾರೆ. ದುಡಿಮೆ ಇಲ್ಲದೆ ಊಟಕ್ಕೂ ಕಷ್ಟವಾಗಿದೆ. ಈ ವೇಳೆ ಇಂದಿರಾ ಕ್ಯಾಂಟೀನ್ ಊಟ ನನಗೆ ಆಸರೆಯಾಗಿದೆ. | ರಿಯಾಜ್ ಶರೀಫ್ ಆಟೋ ಚಾಲಕ
ಸತೀಶ್ ಕೆ.ಬಳ್ಳಾರಿ