ನಿಜವಾದ ಸಂಪತ್ತು ಆರೋಗ್ಯ

IMG-20240813-WA0048
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವನು ಬದುಕಿನಲ್ಲಿ ಉತ್ತಮ ಸಂಸ್ಕಾರ ರೂಢಿಸಿಕೊಂಡು ಸಾಧನೆ ಪಥದತ್ತ ಸಾಗಬೇಕಾದರೆ ಆತನಿಗೆ ಮಾನಸಿಕ ಆರೋಗ್ಯದ ಜತೆ ದೈಹಿಕ ಆರೋಗ್ಯವೂ ಮುಖ್ಯ. ಆರೋಗ್ಯವೇ ನಿಜವಾದ ಸಂಪತ್ತು ಎಂದು ಎಸ್​ಡಿಎಂ ದಂತ ವೈದ್ಯಕಿಯ ಕಾಲೇಜು ಹಾಗೂ ಆಸ್ಪತ್ರೆಯ ಡಾ . ಝೀಬಾ ಹೇಳಿದರು.
ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮ ಹಾಗೂ ಕ್ಯಾನ್ಸರ್​ ರೋಗ ಹರಡುವ ವಿಧಾನ ಮತ್ತು ಅದನ್ನು ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು.
ಯುವ ಜನಾಂಗ ಸಂಘ ದೋಷದಿಂದ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಒಮ್ಮೆ ದುಶ್ಚಟಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟ. ಆದರೆ ಸತತ ಪ್ರಯತ್ನ, ಸೂಕ್ತ ಚಿಕಿತ್ಸೆ, ದೃಢ ನಿರ್ಧಾರದಿಂದ ದೂರವಾಗಬಹುದು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರ ವಹಿಸುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆ.ಆರ್​. ಬಾಳೇರಿ ಮಾತನಾಡಿ, ಅಶುದ್ಧ ಗಾಳಿ, ಒತ್ತಡಯುಕ್ತ ಬದುಕು ನಿರ್ವಹಣೆ, ಪೌಷ್ಟಿಕಾಂಶಗಳ ಕೊರತೆಯಿಂದ ಮನುಷ್ಯರ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ನಾವು ಆರೋಗ್ಯದ ಕಡೆ ಗಮನ ನೀಡಬೇಕು. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ ವ್ಯರ್ಥ ಜೀವನ ಕಳೆಯುತ್ತಿದ್ದಾರೆ. ಅದು ನಿಲ್ಲಬೇಕು. ಎಸ್​ಡಿಎಂ ಸಂಸ್ಥೆಯು ಆರೋಗ್ಯ ಇಲಾಖೆಯೊಂದಿಗೆ ಶಾಲೆಗಳಲ್ಲಿ ತಂಬಾಕು ಸೇವನೆ ಕುರಿತು ಜಾಗೃತಿ ಉಂಟು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಸಂಯೋಜಕರಾದ ಡಿ.ಸಂತಾನ, ಡಾ.ಪ್ರಿಯಾ, ಬಿ.ಪಿ ಜೋಶಿ, ಉಷಾ ಶಿವಣ್ಣನವರ, ಸತ್ಯನಾರಾಯಣ ಜೋಶಿ, ಎಸ್​.ಸಿ. ಗೊರವರ, ಎನ್​.ಜಿ. ಬಾಗವಾನ್​, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.
ರಂಗನಾಥ ವಾಲ್ಮೀಕಿ ನಿರೂಪಿಸಿದರು. ಸಿ.ಸಿ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net