ನೈಜ ಭಕ್ತಿಗೆ ಭಗವಂತನ ಒಲುಮೆ - ಶ್ರೀಶೈಲ ಜಗದ್ಗುರು

01010202
Published on

ಬೆಳಗಾವಿ: ಭಕ್ತಿ ಭಗವಂತನೆಡೆ ಕರೆದುಕೊಂಡು ಹೋಗುತ್ತದೆ. ನಿಜವಾದ ಭಕ್ತಿ ಇದ್ದರೆ ಅಂತವರನ್ನು ಭಗವಂತ ಒಪ್ಪುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.
ನಗರದ ಉಷಾ ಕಾಲನಿಯ ಲಕ್ಷ್ಮೀ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿ, ಭಗವಂತನು ಒಪ್ಪುವ ಹಾಗೂ ಅಪ್ಪುವ ಹಾಗೆ ನಮ್ಮ ಬದುಕು ಇರಬೇಕು. ಇದಕ್ಕಾಗಿ ನಾವು ಎಂದಿಗೂ ನಿಸ್ವಾರ್ಥದಿಂದ ಇರಬೇಕು ಎಂದರು.

ಮಠ-ಮಂದಿರದಲ್ಲಿ ಭಕ್ತರು ಸೇವೆ ಮಾಡುವುದರಿಂದ ಅಹಂಕಾರ ಅಳಿಯುತ್ತದೆ. ಎಲ್ಲರನ್ನೂ ಪ್ರೀತಿಸಿ, ಎಲ್ಲರೊಂದಿಗೆ ಬೆರೆತು, ಎಲ್ಲರೂ ನನ್ನವರು ಎನ್ನುವ ಭಾವನೆ ಬೆಳೆಸಿಕೊಂಡರೆ ಮನುಷ್ಯನಲ್ಲಿ ಸಂತೃಪ್ತಿ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಭಕ್ತರಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಶ್ಲಾಘನೀಯ ಎಂದರು.

ದೇವಸ್ಥಾನ ಧರ್ಮದರ್ಶಿ ಡಾ. ಶಿವರಾಮ ಮಾತನಾಡಿ, ಲಕ್ಷ್ಮೀ ದೇವಸ್ಥಾನಕ್ಕೆ ಈಗಾಗಲೇ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳು ಆಗಮಿಸಿ ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದ ನಗರಕ್ಕೆ ಇರಲಿ ಎಂದು ನಾವು ಪ್ರತಿವರ್ಷ ಪಂಚಪೀಠಾಧೀಶರನ್ನು ಹುಕ್ಕೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಕರೆಸುತ್ತಿದ್ದೇವೆ ಎಂದರು.

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಹಂಕಾರ ಕಡಿಮೆ ಮಾಡಿಕೊಂಡಾಗ ಭಗವಂತನ ಅನುಗ್ರಹವಾಗಲು ಸಾಧ್ಯ. ‘ನಾನೇ ಎಂಬುದು ಬಿಡಿರೋ ನರಕವೇ ಪ್ರಾಪ್ತಿ ಜ್ಞಾನಿಗಳ ಒಡನಾಡಿರೋ’ ಎಂಬ ಮಹಾತ್ಮರ ಸಂದೇಶ ಅರಿತು ಬಾಳಿದರೆ ನಿತ್ಯವೂ ಆನಂದವಾಗಿರಲು ಸಾಧ್ಯ ಎಂದರು.

ವಿರೂಪಾಕ್ಷಯ್ಯ ನೀರಲಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಕಾಕದ ಬ್ರಹ್ಮಾನದಂದ ಸ್ವಾಮೀಜಿ, ಚಂದ್ರಶೇಖರಯ್ಯ ಸಾಲಿಮಠಸವಡಿ ಹಾಗೂ ದೇವಸ್ಥಾನ ಕಮಿಟಿ ಸದಸ್ಯರು ವೇದಿಕೆಯಲ್ಲಿದ್ದರು.
ಇದಕ್ಕೂ ಮೊದಲು ಲಕ್ಷ್ಮೀ ದೇವಸ್ಥಾನ ವತಿಯಿಂದ ನಗರದ ಚನ್ನಮ್ಮ ವೃತ್ತದಿಂದ ಕ್ಲಬ್ ರಸ್ತೆಯ ಮಾರ್ಗವಾಗಿ ಲಕ್ಷ್ಮೀ ದೇವಸ್ಥಾನ ವರೆಗೂ ಶ್ರೀಶೈಲ ಜಗದ್ಗುರುಗಳ ಸಾರೋಟ ಉತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net