

ವಿಜಯವಾಣಿ ಸುದ್ದಿಜಾಲ ಉಡುಪಿ
ಪುತ್ತಿಗೆ ಸುಗುಣೇಂದ್ರ ಶ್ರೀಗಳೊಂದಿಗೆ ಭಗವದ್ಗೀತೆ ಕುರಿತು ಮಾತನಾಡಿದೆ. ಪೂಜ್ಯರು ನೀಡಿದ ಮಾಹಿತಿಯಿಂದ ನನ್ನ ತಲೆಯಲ್ಲಿದ್ದ ವಿಚಾರಗಳೆಲ್ಲ ಉದುರಿ ಹೋಗಿ ಖಾಲಿಯಾಗಿದೆ. ನಮ್ಮೆಲ್ಲರನ್ನು ಯಾವುದೋ ಒಂದು ಶಕ್ತಿ ಕಾಯುತ್ತಿದೆ. ಎಲ್ಲರನ್ನೂ ಅದು ಮುನ್ನಡೆಸುತ್ತಿದೆ. ಖಂಡಿತ ನಾನೇನೂ ಮಾಡುತ್ತಿಲ್ಲ ಎಂಬ ಸತ್ಯದ ಅರಿವಾಗಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದರು.
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಶ್ರೀಗಳ ಮಾತಿನಿಂದ ತುಂ ಪ್ರಭಾವಿತನಾಗಿದ್ದೇನೆ. ಮನುಷ್ಯನಿಗೆ ನಾನು ಎಂಬ ಅಹಂಕಾರ ಬಂದಾಗ ತುಂಬಾ ಸಫರ್ ಆಗುತ್ತಾನೆ. ಅದೇ ನೀನು ಎಂದಾಗ ತುಂಬಾ ಹಗುರವಾಗುತ್ತಾನೆ. ಜೀವನದ ಎಲ್ಲ ವಿಷಯ ಇದರಲ್ಲೇ ಅಡಗಿವೆ. ಸಾಕಷ್ಟು ವಿಚಾರವನ್ನು ಇಂದು ಉಡುಪಿಯಲ್ಲಿ ತಿಳಿದುಕೊಂಡೆ ಎಂದರು.
ಪುತ್ತಿಗೆ ಮಠದ ವತಿಯಿಂದ ಉಪೇಂದ್ರ ಅವರನ್ನು ಸನ್ಮಾನಿಸಲಾಯಿತು. ಲಹರಿ ವೇಲು ಸೇರಿದಂತೆ ಯುಐ ಚಿತ್ರ ತಂಡದವರಿದ್ದರು. ಗೀತಾಮಂದಿರದಲ್ಲಿ ಶ್ರೀಗಳಿಂದ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು. ಬಳಿಕ ಹೊರಬಂದ ನಟ ಉಪೇಂದ್ರನನ್ನು ಕಂಡ ಪ್ರವಾಸಿಗರು ಹಾಗೂ ಭಕ್ತರು ಸೆಲ್ಫಿಗಾಗಿ ಮುಗಿಬಿದ್ದರು.
ಜನರ ಆಶೀರ್ವಾದದಿಂದ ಯುಐ ಸಿನಿಮಾ ರಾಜ್ಯಾದ್ಯಂತ ತುಂಬ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ಥಿಯೇಟರ್ ಫುಲ್ ಆಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಶಿವರಾಜ್ ಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಆಗಿದೆ. ಸದ್ಯದಲ್ಲೇ ಅವರು ಬೆಂಗಳೂರಿಗೆ ಬರಲಿದ್ದು, ಭೇಟಿಯಾಗುತ್ತೇನೆ. ಅವರು ಇನ್ನೂ ನೂರಾರು ಚಿತ್ರಗಳನ್ನು ಮಾಡಬೇಕು. ಅವರೊಂದಿಗೆ ನಾನೂ ಕೂಡ ಚಿತ್ರ ಮಾಡಬೇಕು. ರಜನೀಕಾಂತ್ ಅವರೊಂದಿಗೆ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಶೆಡ್ಯೂಲ್ ಬಾಕಿಯಿದೆ. ಫೆಬ್ರವರಿ ಅಥವಾ ಏಪ್ರಿಲ್ ವೇಳೆಗೆ ಬಿಡುಗಡೆ ಆಗಬಹುದು ಎಂದು ಉಪೇಂದ್ರ ತಿಳಿಸಿದರು.
ಗೀತೋತ್ಸವದ ಸಮಾರೋಪಕ್ಕೆ ನಟ ಉಪೇಂದ್ರ ಬಂದಿರುವುದು ಸಂತಸ ತಂದಿದೆ. ಚಿತ್ರರಂಗದಲ್ಲಿ ಕೇವಲ ಗ್ಲಾಮರ್ನ ಹಿಂದೆ ಹೋಗದೆ ಜನರಿಗೆ ಸರಿಯಾದ ದಾರಿ ತೋರಿಸುವ ನಿರ್ದೇಶಕರೂ ಆಗಿದ್ದಾರೆ. ಜನರನ್ನು ಆಕರ್ಷಿಸುವ, ಜನರಿಂದ ಆದರಿಸುವ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರ ಮೂಲಕವೂ ಭಗವದ್ಗೀತೆಯ ಆದರ್ಶದ ಸಂದೇಶ ವಿಶ್ವದೆಲ್ಲೆಡೆ ಹರಡಲಿ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ