ಬ್ಯಾಂಕ್‌ಗಳಿಂದ ನಿಜ ಅರ್ಥದ ಜವಾಬ್ದಾರಿ ನಿರ್ವಹಣೆ

20gkn2 (2)
Published on

ಗೋಕರ್ಣ: ಬ್ಯಾಂಕ್‌ಗಳು ದೇಶದ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಪ್ರಧಾನ ಕೊಡುಗೆ ನೀಡುವ ಮೂಲಕ ಆರ್ಥಿಕ ಪ್ರಾಧಾನ್ಯ ಪಡೆದ ಬ್ಯಾಂಕ್‌ಗಳು ನಿಜ ಅರ್ಥದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುವಂತಾಗಲಿ ಎಂದು ಇಲ್ಲಿನ ಅಶೋಕೆಯಲ್ಲಿ 32ನೆ ಸ್ವಭಾಷಾ ಚಾತುರ್ಮಾಸ್ಯ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಭಾಗವಹಿಸಿದ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲೊಂದಾದ ಕರ್ನಾಟಕ ಬ್ಯಾಂಕ್ ಮುಖ್ಯಸ್ಥರನ್ನು ಶ್ರೀಗಳು ಆಶೀರ್ವದಿಸಿ ಅನುಗ್ರಹಿಸಿದರು.

ಶ್ರೀಮಠದಲ್ಲಿ ನಿರ್ಮಾಣವಾಗಿರುವ ಸಂಶೋಧನಾ ಕೇಂದ್ರಕ್ಕೆ 55 ಲಕ್ಷ ರೂ. ಕಾಣಿಕೆ ಸಮರ್ಪಿಸುವ ಮೂಲಕ ಭಾರತೀಯ ಸನಾತನ ಸಂಸ್ಕೃತಿಯ ಆಳವಾದ ಪರಿಶೋಧಕ್ಕೆ ಬಹು ದೊಡ್ಡ ಅವಕಾಶವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಶ್ಲಾಘನೀಯ ಮಹತ್ಕಾರ್ಯ ಕೈಗೊಂಡು ಉಳಿದ ಆರ್ಥಿಕ ಸಂಸ್ಥೆಗಳಿಗೆ ಆದರ್ಶವಾಗಿದೆ. ಮಠ ಎಂದರೆ ವಿದ್ಯಾರ್ಥಿಗಳಿರುವ ಸ್ಥಾನ. ಮಠಕ್ಕೆ ಮಠತ್ವ ಸಿದ್ಧಿಸುವುದು ಛಾತ್ರ ಬಳಗದಿಂದ. ಇಂತಹ ಸಂಸ್ಥೆಗಳ ಕೊಡುಗೆಯಿಂದ ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಲ್ಲಿನ ಸತ್ಕಾರ್ಯ ಸಾಂಗವಾಗಿ ನಡೆಯುತ್ತಿದೆ. ಇಂತಹ ಕಾರ್ಯಗಳಿಗಾಗಿ ಛಾತ್ರಭಿಕ್ಷಾ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ರೂಪಿಸಲಾಗಿದ್ದು ಭಾನುವಾರದ ಛಾತ್ರಭಿಕ್ಷೆಯಲ್ಲಿ ಕುಮಟಾ ಮಂಡಲದ 120 ಮಾತೆಯರು ಪಾಲ್ಗೊಂಡು ಮಾತೃತ್ವ ಮೆರೆದಿದ್ದಾರೆ ಎಂದರು.

ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕ ಬಿ.ಎಸ್. ರಾಜಾ, ಉಪ ಮಹಾಪ್ರಬಂಧಕ ಕೆ. ಶ್ಯಾಮ್, ಸಹಾಯಕ ಮಹಾಪ್ರಬಂಧಕ ವಾದಿರಾಜ, ಶಾಖಾ ವ್ಯವಸ್ಥಾಪಕ ಪರಮೇಶ್ವರ ಹೆಗಡೆ ಅವರು ಶ್ರೀಗಳ ಆಶೀರ್ವಾದ ಪಡೆದರು.

ಪುರುಷೋತ್ತಮ ಭಟ್ಟ ಕುಟುಂಬದವರು ಸರ್ವ ಸೇವೆ ಸಲ್ಲಿಸಿದರು. ಚಾತುರ್ಮಾಸ್ಯ ಪ್ರ.ಸಂಚಾಲಕ ಮಂಜುನಾಥ ಸುವರ್ಣಗದ್ದೆ ಪ್ರಸ್ತಾಪಿಸಿದರು. ಡಾ. ಪ್ರಸನ್ನಕುಮಾರ, ಜಿ.ಕೆ. ಹೆಗಡೆ, ಮಹೇಶ ಹೆಗಡೆ, ಪುರುಷೋತ್ತಮ ಭಟ್ಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net