

ಕಾರ್ಕಳ: ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿ ಜೀವನದಲ್ಲಿ ನೈಜ ಜೀವನದ ಪಾಠ ಕಲಿಸುತ್ತದೆ. ವಿದ್ಯಾರ್ಥಿಗಳು ಇಂತಹ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸಮಾಜ ಸೇವೆ ಎಂದರೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅದು ಜೀವನಪೂರ್ತಿ ಅಳವಡಿಸಿಕೊಳ್ಳಬೇಕಾದ ಮನೋಭಾವ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಾರುತಿ ಹೇಳಿದರು. ಕ್ರಿಯೇಟಿವ್ ಪದವಿಪೂರ್ವ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನಶಾಮುಕ್ತ ಭಾರತ ಅಭಿಯಾನ ಹಾಗೂ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 25 ವರ್ಷಗಳಿಗಿಂತಲೂ ಸುದೀರ್ಘ ಅವಧಿಯಿಂದ ಪೌರಕಾರ್ಮಿಕರಾಗಿ ದುಡಿದು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸುಧೀರ್, ಪೂವಪ್ಪ, ರವಿ, ನಾಗೇಶ್, ಸಂಜೀವ ಅವರನ್ನು ಎನ್ನೆಸ್ಸೆಸ್ ಘಟಕದಿಂದ ಸನ್ಮಾನಿಸಲಾಯಿತು. ಶಿಬಿರವಾಣಿಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಾದ ಹಿತಾ ಮತ್ತು ಅಕ್ಷರ್ ಅನುಭವ ಹಂಚಿಕೊಂಡರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉದಯ್‌ಕುಮಾರ್ ಶೆಟ್ಟಿ, ಉದ್ಯಮಿ ವಿಜಯ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ದನ ಇಡ್ಯಾ, ವಕೀಲೆ ನಂದಿನಿ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ, ಕಾರ್ಕಳ ಸರ್ಕಾರಿ ಪರ್ಪೂ ಕಾಲೇಜು ಪ್ರಾಂಶುಪಾಲೆ ಅನಪೂರ್ಣಾ ಕಾಮತ್, ಸಂಸ್ಥೆಯ ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ ಬಿ., ವಿದ್ವಾನ್ ಗಣಪತಿ ಭಟ್, ಆದರ್ಶ ಎಂ.ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಸ್ವಾಗತಿಸಿದರು. ಶಿಬಿರಾಧಿಕಾರಿ ಉಮೇಶ್ ವಂದಿಸಿದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ನಿರೂಪಿಸಿದರು.
ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ, ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ. ಸಮಾಜಮುಖಿಯಾಗಿ ನಾವು ಬದುಕಿದಾಗ ಜೀವನಕ್ಕೊಂದು ನಿಜವಾದ ಅರ್ಥ ಸಿಗುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಾಗ ಭವಿಷ್ಯದಲ್ಲಿ ಒಳ್ಳೆಯ ಪ್ರಜೆಯಾಗುವುದರ ಜತೆಗೆ ಓರ್ವ ಸಮಾಜಸೇವಕರಾಗಿ ಗುರುತಿಕೊಳ್ಳಲು ಸಾಧ್ಯವಿದೆ. ಅಶ್ವಥ್ ಎಸ್.ಎಲ್., ಕ್ರಿಯೇಟಿವ್ ಪದವಿಪೂರ್ವ ಶಿಕ್ಷಣ ಸಂಸ್ಥೆ ಸಹ ಸಂಸ್ಥಾಪಕ