

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿವೃತ್ತಿಯಾದ ನಂತರ ಜೀವನ ಮುಗಿಯುವುದಿಲ್ಲ. ಅಲ್ಲಿಂದ ಜೀವನ ಆರಂಭವಾಗಲಿದೆ ಎಂದು ಮನೊರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ಸತ್ತೂರಿನ ಯಾತ್ರಿ ನಿವಾಸದಲ್ಲಿ ಏರ್ಪಡಿಸಿದ್ದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿ) ನಿವೃತ್ತ ಉದ್ಯೋಗಿಗಳ ಹು-ಧಾ ಸಂಘದ ಸಂಸ್ಥಾಪನಾ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತಿ ನಂತರ ಕ್ರಿಯಾಶೀಲರಾಗಿರಿ. ಆರೋಗ್ಯಕ್ಕೆ, ಅದರಲ್ಲೂ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಸಣ್ಣ ವಿಷಯಗಳಿಗೂ ಖಿನ್ನತೆಗೊಳಗಾಗಬೇಡಿ. ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅತ್ಯವಶ್ಯಕ. ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿ. ಈಗಿನ ವ್ಯಸನಮುಕ್ತ ಕೆಲ ಯುವಕರನ್ನು ಕಂಡಾಗ ನೋವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಪ್ತ ಸಮಾಲೋಚಕಿ ಡಾ. ಅನುಪಮಾ ಪಾಂಡುರಂಗಿ ಮಾತನಾಡಿ, ನಿವೃತ್ತಿಯಾಗುವ ತನಕ ಕುಟುಂಬದ ಬೆಳವಣಿಗೆಗೆ ಶ್ರಮಿಸಿದ್ದೀರಿ. ಈಗ ನಿಮ್ಮನ್ನು ನೀವು ಗಮನಿಸಿ. ನಿಮ್ಮ ಆರೋಗ್ಯಕ್ಕೆ ಮಹತ್ವ ನೀಡಿ ಎಂದರು.
ಸಂಘದ ಕಾರ್ಯದರ್ಶಿ ಬಿ.ಎನ್.ಮದನಬಾವಿ ಮಾತನಾಡಿ, ಕೆಪಿಸಿ ನಿವೃತ್ತ ಉದ್ಯೋಗಿಗಳಿಗೆ ನೀಡುವ ಸವಲತ್ತುಗಳನ್ನು ನ್ಯಾಯಯುತವಾಗಿ ನೀಡಬೇಕು. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದರು.
ಕೆಪಿಸಿ ನಿವೃತ್ತ ಮುಖ್ಯ ಅಭಿಯಂತರ ಸಂಘದ ಅಧ್ಯಕ್ಷ ಮಹಾದೇವ ಅಪ್ಪಿನಬಾವಿ ಅಧ್ಯಕ್ಷತೆ ವಹಿಸಿದ್ದರು. 75 ವರ್ಷ ಪೂರೈಸಿದ ನಿವೃತ್ತ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು.
ಮೈಸೂರಿನ ರಾಮಚಂದ್ರಪ್ಪ, ಡಾ. ಶಂಕರ ಯಾದವಾಡ, ಸಂಘದ ಉಪಾಧ್ಯಕ್ಷ ಪ್ರಕಾಶ ಬೇವೂರ, ವಿಆರ್ಎಲ್ ಸಂಸ್ಥೆ ಕಾನೂನು ಸಲಹೆಗಾರ ಆರ್.ಬಿ. ಗದಕರ, ಮಲ್ಲಿಕಾರ್ಜುನ ಭಜಂತ್ರಿ, ಬಸಪ್ಪ ಬಡಿಗೇರ, ಇತರರು ಇದ್ದರು.
ಮಲ್ಲನಗೌಡ ಪಾಟೀಲ ಸ್ವಾಗತಿಸಿದರು. ಪಿ.ಎಸ್. ಅಪರಂಜಿ ನಿರೂಪಿಸಿದರು.