ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಎಕ್ಸ್‌ಪೋ

Published on

ಮೈಸೂರು: ಭಾರತೀಯ ಬಿಲ್ಡರ್ಸ್ ಸಂಸ್ಥೆಯ ಮೈಸೂರು ಶಾಖೆ, ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳ ಸಂಸ್ಥೆ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್‌ನಿಂದ ಜೂ.7ರಿಂದ 10 ರವರೆಗೆ ನಗರದಲ್ಲಿ ರಿಯಲ್ ಎಸ್ಟೇಟ್ ಎಕ್ಸ್‌ಪೋ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎನ್.ರವಿಶಂಕರ್ ತಿಳಿಸಿದರು.
ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ಇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ 16 ವರ್ಷಗಳಿಂದ ಈ ಪ್ರದರ್ಶನ ಆಯೋಜಿಸಿಕೊಂಡು ಬರಲಾಗುತ್ತಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರ ಮುಖಾಮುಖಿಯಾಗಿರುವ ಕಾರ್ಯಕ್ರಮ ಇದಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆ, ನಾವೀನ್ಯತೆ ಮತ್ತು ಅವಕಾಶಗಳ ಪ್ರದರ್ಶನ ಇದಾಗಿದೆ. ಉದ್ಯಮ ತಜ್ಞರು, ಹೂಡಿಕೆದಾರರು, ಮನೆ ಖರೀದಿದಾರರಿಗೆ ಇದು ಅನುಕೂಲಕರವಾಗಿದೆ ಎಂದರು.
ಈ ವರ್ಷದ ಮೆಗಾ ಎಕ್ಸ್‌ಪೋ ಸಾಕಷ್ಟು ಹಸಿರು ಮತ್ತು ತೆರೆದ ಸ್ಥಳಗಳಿಂದ ಹೊಸ ವಿನ್ಯಾಸದ್ದಾಗಿದ್ದು, ಎಲ್ಲ ರಿಯಲ್ ಎಸ್ಟೇಟ್ ಡೆವಲಪರ್ಸ್ ಪ್ರಮೋಟರ್ಸ್, ಬ್ಯಾಂಕ್‌ಗಳನ್ನು ಒಂದೇ ಸೂರಿನಡಿ ತರಲಾಗುತ್ತಿದೆ. ಅಪಾರ್ಟ್‌ಮೆಂಟ್, ಲೇಔಟ್, ವಿಲ್ಲಾ, ರೋಹೌಸ್‌ಗಳ ಜತೆಗೆ ಬ್ಯಾಂಕ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಪ್ರದರ್ಶನಕಾರರು ಪಾಲ್ಗೊಳ್ಳುತ್ತಿರುವುದರಿಂದಾಗಿ ಗ್ರಾಹಕರು ನೇರವಾಗಿ ಇವರ ಸಂಪರ್ಕದೊಂದಿಗೆ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಸಮಿತಿಯ ಎ.ಎಸ್.ಯೋಗಾ ನರಸಿಂಹ, ಅರುಣ್ ಪಂಡಿತ್, ಅಶ್ವಿನ್ ಪಾಳೇಗಾರ್, ಪ್ರಭಾಕರ್ ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net