ಮೈಸೂರಿನಲ್ಲಿ ‘ಮೈ ರಿಯಾಲಿಟಿ-2023’ ಮೆಗಾ ಪ್ರಾಪರ್ಟಿ ಎಕ್ಸ್‌ಪೋಗೆ ಚಾಲನೆ

Real Estate Expo
Published on

ಮೈಸೂರು: ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸದಿದ್ದರೆ ಮುಂದೊಂದು ದಿನ ಸಾಕಷ್ಟು ಸಮಸ್ಯೆಗಳು ಎದುರಾಗು ವುದು ನಿಶ್ಚಿತ. ಹಾಗಾಗಿ ರಿಯಲ್ ಎಸ್ಟೇಟ್ ಉದ್ಯಮ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕರೆ ನೀಡಿದರು.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ, ಕ್ರೆಡಯ್ ಮೈಸೂರು ಘಟಕ ವತಿಯಿಂದ ನಗರದ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಮೇ 29ರವರೆಗೆ ಹಮ್ಮಿಕೊಂಡಿರುವ ‘ಮೈ ರಿಯಾಲಿಟಿ-2023’ ಮೆಗಾ ಪ್ರಾಪರ್ಟಿ ಎಕ್ಸ್‌ಪೋಗೆ ಚಾಲನೆ ನೀಡಿ ಮಾತನಾಡಿದರು.

ರಿಯಲ್ ಎಸ್ಟೇಟ್ ಅಂದರೆ ಸುಲಭವಾಗಿ ಹಣ ಮಾಡುವ ಹಾಗೂ ಸುಲಭವಾಗಿ ಹಣ ಕಳೆದುಕೊಳ್ಳುವ ಕ್ಷೇತ್ರ ಎಂದು ಹಲವಾರು ಅಂದುಕೊಂಡಿದ್ದಾರೆ. ಆದರೆ, ಇದು ಹಲವಾರು ಜನರ ಕನಸುಗಳನ್ನು ನನಸು ಮಾಡುವ ಕ್ಷೇತ್ರ. ಪ್ರತಿಯೊಬ್ಬರಿಗೂ ಮನೆ ಮಾಡುವ ಕನಸು ಇದ್ದೇ ಇರುತ್ತದೆ. ಜನರ ಕನಸುಗಳು, ಅಭಿರುಚಿಗೆ ತಕ್ಕದಾದ ನಿವೇಶನ, ಮನೆಗಳನ್ನು ಒದಗಿಸುವ ಮಹತ್ವದ ಕಾರ್ಯವನ್ನು ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದೆ. ನಗರದ ಬೆಳವಣಿಗೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಹತ್ವದ ಕೊಡುಗೆ ನೀಡುತ್ತಿದೆ. ಹಾಗಾಗಿ ನಗರವನ್ನು ಯೋಜನಾಬದ್ಧವಾಗಿ ರೂಪಿಸುವಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ನನಗೆ ಇದೆ. ಮಂಗಳೂರಿಗೆ ಹೋಲಿಕೆ ಮಾಡಿದರೆ ಮೈಸೂರಿ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನೂರು ಪಟ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ನನ್ನ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಅಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ಕೋವಿಡ್ ಸಂದರ್ಭ ರಿಯಲ್ ಎಸ್ಟೇಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಜನರು ನಿವೇಶನ ಖರೀದಿ, ಮನೆ ನಿರ್ಮಾಣ ಹಾಗೂ ಫ್ಲಾಟ್‌ಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಕ್ರೆಡಯ್ ರಾಜ್ಯಾಧ್ಯಕ್ಷ ಪ್ರದೀಪ್ ಡಿ. ರಾಯ್ಕರ್ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮ ಕಾರ್ಮಿಕರ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಿದ್ದು, ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಎನ್.ಎಸ್. ಮುರಳೀಧರ, ಮೈ ರಿಯಾಲಿಟಿ ಅಧ್ಯಕ್ಷ ಉದಯ್ ಎಸ್. ಕುಮಾರ್, ಕಾರ್ಯದರ್ಶಿ ಕೆ.ಸಿ. ನಂದಕುಮಾರ್, ಕ್ರೆಡಯ್ ಜಿಲ್ಲಾಧ್ಯಕ್ಷ ಡಿ. ಶ್ರೀಹರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net