

ಮೈಸೂರು: ನಗರದ ಬೃಂದಾವನ ಬಡಾವಣೆಯಲ್ಲಿ ಸೋಮವಾರ ಹಾಡಹಗಲೇ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.
ಬಡಾವಣೆ ನಿವಾಸಿ ಸಂಪತ್ ಕುಮಾರ್ (63) ಹತ್ಯೆಗೀಡಾದ ವ್ಯಕ್ತಿ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಪತ್ ಕುಮಾರ್ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ಬಿಸಿನೆಸ್ ನಡೆಸುತ್ತಿದ್ದರು.
ಮಧ್ಯಾಹ್ನ 3.45ರ ವೇಳೆಗೆ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಸಂಪತ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ. ಕಬ್ಬಿಣದ ರಾಡ್‌ನಿಂದ ಸಂಪತ್ ಕುಮಾರ್ ಅವರ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ. ಸ್ಥಳದಲ್ಲಿ ಇದ್ದ ಸಂಪತ್ ಕುಮಾರ್ ಅವರ 16 ವರ್ಷದ ಮಗನನ್ನು ಸಹ ಹತ್ಯೆ ಮಾಡಲು ದುಷ್ಕರ್ಮಿ ಯತ್ನಿಸಿದ. ಆದರೆ, ಯುವಕ ದುಷ್ಕರ್ಮಿಯ ಕೈಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.