

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅವರನ್ನು ಅಪಹರಿಸಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೋಕಾಕ ತಾಲೂಕಿನ ಕೊಣ್ಣೂರಿನ ಮಂಜುಳಾ ರಾಮನಗಟ್ಟಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಈ ಹಿಂದೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಮತ್ತೆ ಮೂವರನ್ನು ಶನಿವಾರ ಬಂಧಿಸಿ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಬಂಧಿತರ ಸಂಖ್ಯೆ ಏಳಕ್ಕೇರಿಕೆಯಾಗಿದೆ. ಮಂಜುಳಾ ಅವರನ್ನು ಕಲಬುರಗಿಯಲ್ಲಿ, ಯಲ್ಲೇಶನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.
ನೌಕರಿ ಕೊಡಿಸುವುದಾಗಿ ವಂಚನೆ: ಪ್ರಕರಣದಲ್ಲಿ ಮಂಜುಳಾ ಪಾತ್ರ ಪ್ರಮುಖವಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ರಾಜಕೀಯ ಪಕ್ಷ ಮತ್ತು ಸಂಘಟನೆಯೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ. ತಹಸೀಲ್ದಾರ್ ಕಚೇರಿಯಲ್ಲಿ ‘ಡಿ’ ಗ್ರೂಪ್ ನೌಕರಿ ಮತ್ತು ಹೊರಗುತ್ತಿಗೆ ನೌಕರಿ ಕೊಡಿಸುವುದಾಗಿ ಇಬ್ಬರಿಂದ ತಲಾ 2.5 ಲಕ್ಷ ರೂ. ಲಂಚ ಪಡೆದ ಕುರಿತಾಗಿಯೂ ಕುಲಗೋಡ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮಂಜುಳಾ ಜತೆಗೆ, ಯಲ್ಲೇಶ ವಾಲೀಕಾರ, ಪರಶುರಾಮ ಕಾಂಬಳೆ ಬಂಧಿಸಿ, ವಿಚಾರಣೆ ಮಾಡುತ್ತಿದ್ದೇವೆ ಎಂದರು.
ಬಂಧಿತರಿಂದ ಚಿನ್ನಾಭರಣ, ಹಣ ವಶ: ಬಸವರಾಜ ಅಂಬಿ ಅಪಹರಣಕ್ಕಾಗಿ ಮಂಜುಳಾ ಅವರೇ ಮುಖ್ಯವಾಗಿ ಸಂಚು ರೂಪಿಸಿದ್ದರು. ಇದಕ್ಕೆ ಸಹಕರಿಸಿದ ಆರೋಪಿಗಳಿಗೂ ಹಣ ಕೊಡುವುದಾಗಿ ತಿಳಿಸಿದ್ದರು. ಮಂಜುಳಾ ಪುತ್ರ ಈಶ್ವರನನ್ನು ಈಗಾಗಲೇ ಬಂಧಿಸಿದ್ದೇವೆ. ಬಸವರಾಜ ಬಳಿ ಆರೋಪಿಗಳು ಕಸಿದುಕೊಂಡಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 6 ಮೊಬೈಲ್, ನಾಲ್ಕು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.
ರಾಜಕೀಯ ಪ್ರಭಾವವಿಲ್ಲ:ಹಣದ ಯಾವುದೇ ವ್ಯವಹಾರ ಇರಲಿಲ್ಲ ಎಂದು ಸ್ವತಃ ಬಸವರಾಜ ಹೇಳುತ್ತಾರೆ. ಹಣದ ವ್ಯವಹಾರ ಇತ್ತೆಂದು ಮಹಿಳೆ ಹೇಳುತ್ತಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಒಂದು ರಾಜಕೀಯ ಪಕ್ಷದೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ. ಆದರೆ, ಅಪಹರಣಕ್ಕೂ ಮತ್ತು ಆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಪ್ರಕಣದಲ್ಲಿ ಮಂಜುಳಾ ಬಂಧಿಸದಂತೆ ಯಾವ ರಾಜಕಾರಣಿಯೂ ಪ್ರಭಾವ ಬೀರಿಲ್ಲ. ಒಂದುವೇಳೆ ಯಾರಾದರೂ ಪ್ರಭಾವ ಬೀರಿದ್ದರೆ, ಏಳು ಮಂದಿಯನ್ನು ಬಂಧಿಸಲು ಆಗುತ್ತಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಪಹರಣಕಾರರ ಬೇಡಿಕೆಯಂತೆ ಹಣ ನೀಡಲು ಎರಡು ಬಾರಿ ಹೋದರೂ ಹಣ ಪಡೆದಿರಲಿಲ್ಲ. ಒಂದು ಸಾರಿ ಏಳು ಜನ ಸೇರಿಕೊಂಡು ಎಂಟು ಚೀಲಗಳಲ್ಲಿ ಹಣ ತುಂಬಿಕೊಂಡು ಆರೋಪಿಗಳು ಗೊತ್ತುಪಡಿಸಿದ ನಿಪ್ಪಾಣಿಯ ಮತ್ತೊಂದು ಸ್ಥಳಕ್ಕೆ ಹೋಗಿದ್ದರು. ಅಲ್ಲಿಯೂ ಹಣ ಪಡೆದಿರಲಿಲ್ಲ. ಹಾಗಾಗಿ ಶೋಭಾ ಅವರು ಘಟಪ್ರಭಾ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದರು ಎಂದು ಡಾ. ಭೀಮಾಶಂಕರ್ ಗುಳೇದ ತಿಳಿಸಿದರು.
ಸಚಿವ ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಈ ಮಹಿಳೆ ಕ್ಲಿಕ್ಕಿಸಿಕೊಂಡ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮಧ್ಯೆ ಮಂಜುಳಾ ರಾಮನಗಟ್ಟಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ. ಅವರಿಗೆ ಪಕ್ಷದ ಯಾವುದೇ ಹುದ್ದೆ ಅಥವಾ ಸದಸ್ಯತ್ವ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಅಪಹರಣ ಪ್ರಕರಣಕ್ಕೂ ಸತೀಶ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ. ನಾನು ಅಂದು ಕಾರು ರಿಪೇರಿ ಮಾಡಿಸಲು ಸಾಂಗ್ಲಿಗೆ ತೆರಳಿದ್ದೆ. ಚಿಕ್ಕೋಡಿ ಬರುತ್ತಿದ್ದಂತೆ ಕಾರು ಅಡ್ಡಗಟ್ಟಿ ನನ್ನನ್ನು ಅಪಹರಿಸಿದರು. ಮನೆಗೆ ಕರೆ ಮಾಡಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ದಿನಕ್ಕೆ ಮೂರರಿಂದ ನಾಲ್ಕು ಕಾರು ಬದಲಾಯಿಸಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸುತ್ತಿಸಿದ್ದಾರೆ. ಪೊಲೀಸರು ಲೋಕೇಶನ್ ಆಧರಿಸಿ ನನ್ನನ್ನು ರಕ್ಷಿಸಿದ್ದಾರೆ ಎಂದು ಅಪಹರಣಕ್ಕೊಳಗಾಗಿದ್ದ ಬಸವರಾಜ್ ಅಂಬಿ ತಿಳಿಸಿದ್ದಾರೆ.