

*ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಅರಸೀಕೆರೆ
ಗೌರಿ-ಗಣೇಶ ಹಾಗೂ ಈದ್‌ಮಿಲಾದ್ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿ ಆವರಣದಲ್ಲಿರುವ ರೈತ ಭವನದಲ್ಲಿ ಮಂಗಳವಾರ ಸೌಹಾರ್ದ ಸಭೆ ಆಯೋಜಿಸಲಾಗಿತ್ತು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕಳೆದ ಬಾರಿಯ ಗೌರಿ-ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಗಣಪತಿ ಮಂಡಳಿ ಹಾಗೂ ಪೊಲೀಸರು ನಡೆದುಕೊಂಡ ರೀತಿ ಸರಿಯಿಲ್ಲ. ದಾನಿಗಳ ಸಹಕಾರದೊಂದಿಗೆ ಮೆರವಣೆಗೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಸಿದ್ಧನಿದ್ದು ಎಲ್ಲರೂ ಯಶಸ್ಸಿಗೆ ಕೈಜೋಡಿಸಬೇಕು. ಮುಂಬೈನಿಂದ ವಿನೂತನ ಮಾದರಿಯ ಡಿಜೆ ತರಲು ನಿರ್ಧರಿಸಿದ್ದು ಯುವಕರು ಕುಣಿದು ಕಪ್ಪಳಿಸಲಿ ಎಂದರು.
ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ, ಹಬ್ಬಗಳು ಸಹಬಾಳ್ವೆಯ ಸಂಕೇತವಾಗಬೇಕು. ಗೌರಿ-ಗಣೇಶವನ್ನು ಪ್ರತಿಷ್ಠಾಪಿಸ ದಿನದಿಂದ ವಿಸರ್ಜನೆ ಮಾಡುವವರೆಗೂ ನಗರಸಭೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.
ಎಎಸ್ಪಿ ತಮ್ಮಯ್ಯ ಮಾತನಾಡಿ, ಹಬ್ಬದ ಹೆಸರಿನಲ್ಲಿ ಶಾಂತಿ ಭಂಗ ಉಂಟು ಮಾಡಲು ಪ್ರಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಈದ್-ಮಿಲಾದ್ ಮೆರವಣಿಗೆ ಹಾಗೂ ಗೌರಿ-ಗಣೇಶ ಪ್ರತಿಷ್ಠಾನೆಯ ರೂಪುರೇಷೆಗಳ ಕುರಿತು ಡಿವೈಎಸ್‌ಪಿ ಲೋಕೇಶ್ ವಿವರಿಸಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಹಿಂದು ಹಾಗೂ ಮುಸ್ಲಿಂ ಸಂಘಟನೆಯ ಮುಖಂಡರು ಮಾತನಾಡಿದರು. ತಾಪಂ ಇಒ ನಾಗರಾಜ್, ನಗರಠಾಣೆಯ ಇನ್ಸ್‌ಪೆಕ್ಟರ್ ಗಂಗಾಧರ್, ಪೌರಾಯುಕ್ತ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗಣಪತಿ ಹಾಗೂ ಜಮಾತ್ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.