ತುಮಕೂರು ಜಿಲ್ಲೆಯಲ್ಲಿ 2ನೇ ಹಂತದ ಮತದಾನಕ್ಕೆ ಸಜ್ಜು ; 5 ತಾಲೂಕುಗಳಲ್ಲೂ ಬಿಗಿ ಬಂದೋಬಸ್ತ್

24 nvk 1
Published on

ತುಮಕೂರು: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಎರಡನೇ ಹಂತದ ಮತದಾನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳ 161 ಗ್ರಾಪಂಗಳ 2400 ಸದಸ್ಯ ಸ್ಥಾನಗಳಿಗೆ 1321 ಮತಗಟ್ಟೆಗಳಲ್ಲಿ ಡಿ.27ರಂದು ಬೆಳಗ್ಗೆ 7ಕ್ಕೆ ಸಂಜೆ 5ರವರೆಗೆ ಮತದಾನ ನಡೆಯಲಿದೆ.

131 ಅತೀ ಸೂಕ್ಷ್ಮ, 198 ಸೂಕ್ಷ್ಮ ಹಾಗೂ 992 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಿದ್ದು, ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಮತದಾರರು ಮತಗಟ್ಟೆಗೆ ಆಗಮಿಸಿದಾಗ ಮೊದಲಿಗೆ ಥರ್ಮಲ್ ಸ್ಯ್ಕಾನಿಂಗ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಪರಸ್ಪರ ಅಂತರ ಕಾಪಾಡಬೇಕು.

ಕರೊನಾ ಸೋಂಕಿತರು ಹಾಗೂ ಶಂಕಿತರಿಗೆ ಪಿಪಿ ಕಿಟ್ ಧರಿಸಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಡಿಎಸ್‌ಪಿ 5, ಸಿಪಿಐ, ಪಿಐ 15, ಪಿಎಸ್‌ಐ 49, ಎಎಸ್‌ಐ 73, ಎಚ್‌ಸಿ 141, ಪಿಸಿ 872, ಎಚ್‌ಜಿ 627, ಡಿಎಆರ್ 5 ತುಕಡಿ, ಕೆಎಸ್‌ಆರ್‌ಪಿ 5 ತುಕಡಿ ಸೇರಿ ಒಟ್ಟು 1792 ಪೊಲೀಸ್ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಮಸ್ಟರಿಂಗ್ ಕೇಂದ್ರಗಳು: ಮಧುಗಿರಿ ಸರ್ಕಾರಿ ಪದವಿ ಕಾಲೇಜು, ಶಿರಾ ಸರ್ಕಾರಿ ಪದವಿ ಕಾಲೇಜು, ತಿಪಟೂರು ಬಾಲಕರ ಪಿಯು ಕಾಲೇಜು, ತುರುವೇಕೆರೆ ಸರ್ಕಾರಿ ಜೂನಿಯರ್ ಕಾಲೇಜು, ಚಿಕ್ಕನಾಯಕನಹಳ್ಳಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಗ್ರಾಪಂ ಚುನಾವಣೆ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಡಿ ಮಸ್ಟರಿಂಗ್ ಕಾರ್ಯ ಮತದಾನ ತಿಪಟೂರಿನ ಪಲ್ಲಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ. ಮತದಾನ ನಡೆಯುವ ಉಳಿದ ತಾಲೂಕುಗಳ ಮಸ್ಟರಿಂಗ್ ಕೇಂದ್ರಗಳಲ್ಲಿಯೇ ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ.

ನಿಷೇಧಾಜ್ಞೆ ಜಾರಿ : ಎರಡನೇ ಹಂತದ ಮತದಾನ ನಡೆಯುವ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿ.25ರ ಸಂಜೆ 6 ರಿಂದ ಡಿ.27ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಡಿ.25ರ ಸಂಜೆ 5ರಿಂದ 27ರ ಸಂಜೆ 5ರವರೆಗೆ ಮದ್ಯದ ಅಂಗಡಿ ಮತ್ತು ಮದ್ಯ ತಯಾರಿಕಾ ಘಟಕ ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net