

ಹುಬ್ಬಳ್ಳಿ: ಕರ್ನಾಟಕದಲ್ಲಿ ಹಿಂದುಗಳು ಜೀವನ ಮಾಡುವುದಕ್ಕೆ ಹುಬ್ಬಳ್ಳಿಯ ಹಿಂದು ಶಕ್ತಿ ಕಾರಣ. ನಾನು ಹಿಂದುಗಳ ವೋಟ್‌ನಿಂದಲೇ ಗೆದ್ದಿದ್ದೇನೆ. ‘ಭಗವಾ’ಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶಕ್ತಿ ರೋಡ್‌ನ ಬಾನಿ ಓಣಿಯಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಶ್ರೀರಾಮ ಜಯಂತಿ ಹಾಗೂ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀರಾಮ ಯಾವುದೇ ಜಾತಿಗೆ ಮೀಸಲಿಲ್ಲ. ದಲಿತರು, ಹಿಂದುಳಿದವರು, ಮೇಲ್ವರ್ಗದವರೆಲ್ಲರ ಮನೆಯಲ್ಲಿ ರಾಮ ಇದ್ದಾನೆ. ರಾಮನ ಬಿಟ್ಟು ಭಾರತವಿಲ್ಲ. ಭಾರತ ಬಿಟ್ಟು ರಾಮ ಇಲ್ಲ. ಸಾಬರಕ್ಕಿಂತ ಹರಾಮ್‌ಕೋರರು ಕೆಲ ಹಿಂದುಗಳಿದ್ದಾರೆ ಎಂದು ತಿವಿದರು.
ಜಗತ್ತಿನಲ್ಲಿ ಮೊದಲು ಹುಟ್ಟಿದ್ದು ಸನಾತನ ಧರ್ಮ. ವಕ್ಫ್‌ಗೆ ಹಿಂದುಗಳು ವಿರೋಧ ಮಾಡುತ್ತಿದ್ದಾರೆ. ದೇಶ ಸುರಕ್ಷಿತವಾಗಿರಬೇಕಾದರೆ ನರೇಂದ್ರ ಮೋದಿ ಕಾರಣ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ನನ್ನನ್ನು ಹೊರಗೆ ಹಾಕಿರಬಹುದು. ನನ್ನ ಹೃದಯದಲ್ಲಿ ಬಿಜೆಪಿ ಇದೆ. ನೀವ್ಯಾರು ಏನು ಕಿಸಿಯಲು ಆಗುವುದಿಲ್ಲ ಎಂದು ಕುಟುಕಿದರು.
ಕೆಲವರು ಲಿಂಗಾಯತ ಧರ್ಮ ಬೇರೆ ಎನ್ನುತ್ತಿದ್ದಾರೆ. ಸನಾತನ ಧರ್ಮ ಉಳಿದರೆ, ವಿಭೂತಿ ಉಳಿಯುತ್ತದೆ. ನನಗೆ ಹೊರಗ ಹಾಕಿದ ಮೇಲೆ ನಾಲ್ಕು ಪಟ್ಟ ಜನರ ಆಶೀರ್ವಾದ ಸಿಕ್ಕಿದೆ. ನಾನು ಇಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹಿಂದುಪರ ಕರ್ನಾಟಕದಲ್ಲಿ ಯಾರು ಮಾತನಾಡುತ್ತಾರೆ ಅವರೇ ಮುಂದಿನ ಮುಖ್ಯಮಂತ್ರಿ. 2028ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ. ನಾನು ಗೃಹ ಮಂತ್ರಿ ಆಗಿದ್ದರೆ, ಹಳೇ ಹುಬ್ಬಳ್ಳಿ ಠಾಣೆ ಹೊಕ್ಕಿದ್ದವರನ್ನು ಜನ್ನತ್‌ಗೆ (ಸ್ವರ್ಗ) ಕಳುಹಿಸುತ್ತಿದ್ದೆ. ಶ್ರೀರಾಮ ಜಯಂತಿ, ಗಣೇಶೋತ್ಸವಕ್ಕೆ ಮೆರವಣಿಗೆ ನಡೆಸಿದ ಹಿಂದುಗಳ ಮೇಲೆ ಕಲ್ಲು ಹೊಗೆದರೆ ಅವರೆಲ್ಲರನ್ನೂ ಜನ್ನತ್‌ಗೆ ಸಿದ್ಧರಾಗಿರಿ. ಗಣಪತಿಯನ್ನೂ ಜೈಲಿಗೆ ಹಾಕುವಂಥ ಕೆಟ್ಟ ಸರ್ಕಾರ ಬಂದಿದೆ. ಈಗ ನನ್ನನ್ನು ಕಟ್ಟಿ ಹಾಕಿರಬಹುದು, ಲೋಕಸಭಾ ಚುನಾವಣೆ ಬಂದರೆ ಮತ್ತೆ ಎಲ್ಲರೂ ನನ್ನ ಮನೆ ಬಾಗಿಲಿಗೆ ಬರುತ್ತಾರೆ. ಆರು ವರ್ಷ ಅಲ್ಲ, ಆರು ತಿಂಗಳು ತಡೆಯುವುದಿಲ್ಲ ಎಂದು ಬಿಜೆಪಿಗೆ ಠಕ್ಕರ್ ಕೊಟ್ಟರು.
ವಿಶ್ವ ಹಿಂದು ಪರಿಷತ್‌ನ ಜಯತೀರ್ಥ ಕಟ್ಟಿ ಮಾತನಾಡಿ, ರಾಮ ಜೋಡಿಸುವ ವ್ಯಕ್ತಿ, ವಿಘಟಿಸುವುದಿಲ್ಲ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಕಳೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಬದುಕು ಗಟ್ಟಿಗೊಳಿಸುವ ಕೆಲಸ ಮಾಡೋಣ. ವಿಶ್ವಗುರು ಮಾಡಲು ಸಂಕಲ್ಪ ತೊಡೋಣ ಎಂದರು.
ಹಂಪಿ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ ಮಾತನಾಡಿದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ, ಭಾರ್ಗವಾನಂದ ಗಿರಿ ಸ್ವಾಮೀಜಿ, ಹಿಮಾಲಯದ ನಾಗಸಾಧು ರಾಜೇಶಪುರಿ ಜಟಾಧಾರಿ ಸ್ವಾಮೀಜಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಮುಖರಾದ ವಸಂತ ಹೊರಟ್ಟಿ, ಈಶ್ವರ ಶಿರಕೋಳ, ಸುಬ್ರಹ್ಮಣ್ಯ ಶಿರಕೋಳ, ಮಲ್ಲಪ್ಪ ಶಿರಕೋಳ, ಕೃಷ್ಣ ಗಂಡಗಾಳೇಕರ ಇತರರು ಇದ್ದರು. ನಂತರ ಅದ್ದೂರಿ ಮೆರವಣಿಗೆ ಜರುಗಿತು.