ಟೀಕೆ ಎದುರಿಸಿ ಮುನ್ನುಗ್ಗಲು ಸಿದ್ಧ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

mysore
Published on

ಮೈಸೂರು: ಹವಾ ನಿಯಂತ್ರಿತ ಕೊಠಡಿಯಿಂದ(ಎಸಿ) ಹೊರಬಂದು ಸಾರ್ವಜನಿಕರಿಗಾಗಿ ಕೆಲಸ ಮಾಡುವುದು ಕಷ್ಟವೇನಲ್ಲ. ಟೀಕೆ ಎದುರಿಸಿ ರಾಜಕೀಯವಾಗಿ ಮುಂದುವರಿಯಲು ಸಿದ್ಧ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.


ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ನಂತರ ಪ್ರಥಮ ಬಾರಿಗೆ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


ಊಟ ಮಾಡುವಾಗ ಸಾಂಬಾರ್‌ನಲ್ಲಿ ಒಂದು ಬಾರಿ ಮೆಣಸಿನ ಕಾಯಿ ಸಿಗುವುದು ಸಹಜ. ಆದರೆ ರಾಜಕಾರಣದಲ್ಲಿ ದಿನವೂ ಟೀಕೆ ರೂಪದಲ್ಲಿ ಮೆಣಸಿನಕಾಯಿ ಸಿಗುತ್ತಲೇ ಇರುತ್ತದೆ. ಆದ್ದರಿಂದ ಟೀಕೆಗಳನ್ನೂ ಸಮರ್ಥವಾಗಿ ಎದುರಿಸಲು ತಯಾರು ಆಗಿರುವೆ ಎಂದರು.


ರಾಜವಂಶಸ್ಥರು ಎಂಬ ಪ್ರೀತಿ, ವಿಶ್ವಾಸ, ನಂಬಿಕೆ ನಮ್ಮ ಜನರಲ್ಲಿರುವುದು ಸಹಜ. ಆದರೆ, ಸಂವಿಧಾನದ ಪ್ರಕಾರ ನಾನೂ ಸಾಮಾನ್ಯ ಪ್ರಜೆ. ಜನರು ಆಶೀರ್ವಾದ ಮಾಡಿದರೆ ಸಾಮಾನ್ಯ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.


ಹೇಗೆ ರಾಜಕಾರಣದ ಸವಾಲುಗಳನ್ನು ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಸವಾಲು ಎದುರಿಸುವುದು ಕಷ್ಟವೇನೂ ಅಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರದ ಅವಶ್ಯಕತೆ ಇದೆ. ಆದ್ದರಿಂದ ಜನಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದು, ಜನರು ಹೊಣೆಗಾರಿಕೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದರು.


ಕಳೆದ ಒಂದು ವರ್ಷದಿಂದ ನನ್ನ ರಾಜಕೀಯ ಪ್ರವೇಶ ಕುರಿತು ಚರ್ಚೆ ನಡೆಯುತ್ತಿತ್ತು. ಎರಡು ತಿಂಗಳ ಹಿಂದೆಯೇ ನನಗೆ ಟಿಕೆಟ್ ಕೊಡುವ ಕುರಿತು ಮುನ್ಸೂಚನೆಯೂ ಸಿಕ್ಕಿತ್ತು. ಆದರೆ ಅಧಿಕೃತ ಘೋಷಣೆ ಆಗುವ ತನಕ ಯಾವ ಹೇಳಿಕೆಯನ್ನು ನೀಡದಂತೆ ಸೂಚನೆ ನೀಡಲಾಗಿತ್ತು. ಈ ಕಾರಣದಿಂದಾಗಿ ಯಾವುದೇ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ ಎಂದರು.


ಕಳೆದ 9 ವರ್ಷಗಳಿಂದ ನನ್ನ ವೈಯಕ್ತಿಕ ಜೀವನದ ಜತೆಗೆ ಸಾರ್ವಜನಿಕರ ಕೆಲಸವನ್ನೂ ಮಾಡಿರುವೆ. ಕಳೆದ ಒಂದು ವರ್ಷದ ಹಿಂದೆಯೇ ರಾಜಕೀಯ ಪ್ರವೇಶ ಮಾಡುವ ಮನಸ್ಸು ಮಾಡಿದ್ದೆ. ನಮ್ಮ ತಾಯಿಯ ಆಶೀರ್ವಾದ ದೊರೆತ ನಂತರ ನಾನು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.


ನಮ್ಮ ಪೂರ್ವಜರು ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆಗಳು ನನಗೆ ಶ್ರೀರಕ್ಷೆ. ಅವರ ಜನಪರ ಕಾಳಜಿಯನ್ನು ಆದರ್ಶವಾಗಿಟ್ಟುಕೊಂಡು ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಕನಸು ಕಟ್ಟಿಕೊಂಡಿದ್ದೇನೆ ಎಂದು ಹೇಳಿದರು.


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಈವರೆಗೂ ಸಂಸದರಾಗಿದ್ದ ಎಲ್ಲರೂ ಈ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಸಾಕಷ್ಟು ಅಭಿವೃದ್ಧಿಯ ಅಡಿಪಾಯ ಹಾಕಿದ್ದಾರೆ. ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಮೈ.ವಿ.ರವಿಶಂಕರ್, ಪಣೀಶ್, ಸಂದೇಶ್‌ಸ್ವಾಮಿ, ಹರೀಶ್, ಎನ್.ಆರ್.ಕೃಷ್ಣಪ್ಪಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net