ವಿಶ್ವನಾಥ, ಕೃಷ್ಣ ಮಂದಿರಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ

k s eshwar (1)
Published on

ಶಿವಮೊಗ್ಗ: ಕಾಶಿಯಲ್ಲಿ ವಿಶ್ವನಾಥ ಹಾಗೂ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ವಣದ ಅಪೇಕ್ಷೆ ವ್ಯಕ್ತಪಡಿಸಿದ್ದು ನಿಜ. ಇದು ನನ್ನೊಬ್ಬನ ಅಭಿಮತವಲ್ಲ, ದೇಶದ ಕೋಟ್ಯಂತರ ಜನರ ಅಪೇಕ್ಷೆ. ಈ ವಿಚಾರದಲ್ಲಿ ನೂರು ಬಾರಿ ಜೈಲಿಗೆ ಹೋಗಲು ಅಥವಾ ಜೀವನ ಪರ್ಯಂತ ಜೈಲಿನಲ್ಲಿರಲೂ ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಕಾಶಿ ಮತ್ತು ಮಥುರಾದಲ್ಲಿ ಮಂದಿರಗಳನ್ನು ನಾಶ ಮಾಡಿ ಮಸೀದಿ ನಿರ್ವಿುಸಿದ ಕುರುಹುಗಳಿದ್ದು ಕಾಶಿಯಲ್ಲಿ ವಿಶ್ವನಾಥ ಹಾಗೂ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣ ಮಾಡಬೇಕಿದೆ. ಈ ಎರಡೂ ಶ್ರದ್ಧಾ ಕೇಂದ್ರಗಳಿಗೆ ಮುಸ್ಲಿಮರಿಂದ ಮುಕ್ತಿ ಸಿಗಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ಮಥುರಾ ಮತ್ತು ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಶ್ರೀಕೃಷ್ಣ ಹಾಗೂ ವಿಶ್ವನಾಥನ ಮಂದಿರಗಳನ್ನು ನಿರ್ನಾಮ ಮಾಡಿ ಮಸೀದಿ ನಿರ್ವಿುಸಿರುವ ವಾಸ್ತವ ಸ್ಥಿತಿ ಕಂಡು ಮನಸ್ಸಿಗೆ ನೋವಾಯಿತು. ದುಃಖವೂ ಆಯಿತು. ಅಯೋಧ್ಯೆ ಮಾದರಿ ಇವೆರಡೂ ಕ್ಷೇತ್ರದಲ್ಲೂ ಮಂದಿರಗಳ ನಿರ್ಮಾಣ ಆಗಬೇಕೆಂಬುದು ನನ್ನ ವೈಯಕ್ತಿಯ ಅಭಿಪ್ರಾಯ ವ್ಯಕ್ತ ಮಾಡಿದ್ದೆ. ಈ ಹೇಳಿಕೆ ಮುಂದಿಟ್ಟುಕೊಂಡು ಹೈದ್ರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ.ಡಿ.ಶಿವಕುಮಾರ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಪಕ್ಷಾತೀತವಾಗಿದ್ದು ಓಟಿನ ರಾಜರಾಕಣ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಸಿಮೆಂಟ್ ಕಟ್ಟಡ, ರಸ್ತೆ, ಚರಂಡಿ ನಿರ್ವಣಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಾಗಿ ಸ್ವಾಭಿಮಾನದ ಸಂಕೇತವಾಗಿರುವ ಶ್ರದ್ಧಾ ಕೇಂದ್ರಗಳಿಗೆ ಮುಕ್ತಿ ಸಿಕ್ಕಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದಕ್ಕೆ ಸಾರ್ಥಕವಾಗುತ್ತದೆ. ಈ ಹಿಂದೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೂಡ ಗುಲಾಮಗಿರಿಯ ಸಂಕೇತವಾಗಿತ್ತು. ಕೋಟಿ ಕೋಟಿ ಜನರ ಅಪೇಕ್ಷೆಯಂತೆ ಇದೀಗ ಶ್ರೀರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದರು.

ಡಿಕೆಶಿ ವಿರುದ್ಧ ಸಚಿವರ ಕಿಡಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹ ಮಾಡಿದ್ದಾರೆ. ನನಗೆ ಬಂಧನ ಹೊಸದಲ್ಲ. ತುರ್ತು ಪರಿಸ್ಥಿತಿ ವೇಳೆಯೂ ಜೈಲಿಗೆ ಹೋಗಿ ಬಂದಿದ್ದೇನೆ. ಮುಸ್ಲಿಮರನ್ನು ತೃಪ್ತಿಪಡಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಸಚಿವ ಈಶ್ವರಪ್ಪ ಕಿಡಿ ಕಾರಿದರು. ನಾನು ಮಂತ್ರಿ ಸ್ಥಾನವನ್ನೂ ಕಳೆದುಕೊಳ್ಳುವುದಿಲ್ಲ, ಜೈಲಿಗೂ ಹೋಗುವುದಿಲ್ಲ. ಸ್ವಾತಂತ್ರ್ಯ ಸಿಕ್ಕಿದ್ದು ಶ್ರದ್ಧಾ ಕೇಂದ್ರಗಳನ್ನು ಮುಸ್ಲಿಮರಿಂದ ಮುಕ್ತ ಮಾಡುವಂತೆ ಒತ್ತಾಯವಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ರಾಷ್ಟ್ರಭಕ್ತರು ಬೆಂಬಲಿಸುತ್ತಾರೆಂದು ವಿಶ್ವಾಸ ನನ್ನದು ಎಂದರು.

ಓವೈಸಿ ರಕ್ತವೇ ಹಿಂದು ವಿರೋಧಿ: ಸಂಸದ ಅಸಾದುದ್ದೀನ್ ಓವೈಸಿ ಅವರದ್ದು ಹಿಂದು ವಿರೋಧಿ ರಕ್ತ. ಹಿಂದು ಮಂದಿರಗಳ ಬಗ್ಗೆ ಅವರಿಗೆ ಶ್ರದ್ಧಾ ಭಕ್ತಿ ಬರಲು ಸಾಧ್ಯವಿಲ್ಲ. ಅವರು ಎಂದಿಗೂ ರಾಷ್ಟ್ರಭಕ್ತರ ಪರವಾಗಿ ಬರುವುದಿಲ್ಲ. ಕಾಶಿ ಮತ್ತು ಮಥುರಾದಲ್ಲೂ ಮಸೀದಿಗಳನ್ನು ಕೆಡವಿ ವಿಶ್ವನಾಥ ಮತ್ತು ಶ್ರೀಕೃಷ್ಣ ಮಂದಿರ ನಿರ್ಮಾಣ ಮಾಡಬೇಕೆನ್ನುವ ವಿಚಾರವನ್ನೇ ಓವೈಸಿ ರಾಜಕಾರಣಕ್ಕೆ ತಿರುಗಿಸಿದ್ದಾರೆ. ಅವರಿಂದ ಹಿಂದು ಮಂದಿರಗಳ ನಿರ್ಮಾಣ ನಿರೀಕ್ಷಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಅವರ ಬಗ್ಗೆ ಹೆಚ್ಚು ಟೀಕೆ ಮಾಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.

ಕಾಶಿ ಹಾಗೂ ಮಥುರಾ ದೇವಸ್ಥಾನಗಳು ಸ್ವಾಭಿಮಾನ ಮತ್ತು ಸಂಸ್ಕೃತಿಯ ಸಂಕೇತ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆದು ರಾಜಕೀಯ ಲಾಭ ಪಡೆಯುತ್ತಿರುವ ಕಾಂಗ್ರೆಸ್ಸಿಗರು ಹಾಗೂ ಇತರೆ ಪಕ್ಷಗಳಿಗೆ ಸತ್ಯ ಸಂಗತಿ ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ. ಹಾಗಾಗಿ ನನ್ನ ಹೇಳಿಕೆಗಳು ಅವರಿಗೆ ಪ್ರಚೋದನಕಾರಿಯಾಗಿ ಕಾಣುತ್ತಿವೆ.

| ಕೆ.ಎಸ್.ಈಶ್ವರಪ್ಪ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net