

ಶಿವಮೊಗ್ಗ: ನಗರದಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ನನ್ನ ಮಗನ ಮೇಲಾಣೆ ಆಶ್ರಯ ಯೋಜನೆಯ ಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ರಾಷ್ಟ್ರಭಕ್ತ ಬಳಗದೊಂದಿಗೆ ಗುರುವಾರ ಜನಾಗ್ರಹ ಜಾಥಾ ನಡೆಸಿದ ಅವರು, ಗೋಪಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಸುಮಾರು 9 ವರ್ಷಗಳ ಹಿಂದೆಯೇ ಆಶ್ರಯ ಯೋಜನೆಯನ್ನು ಆರಂಭಿಸಲಾಗಿತ್ತು. ಮೂರು ವರ್ಷಗಳಲ್ಲೇ ಮನೆಗಳನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಇದುವರೆಗೂ ಯೋಜನೆ ಪೂರ್ಣವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಗಾಗಿ ಮುಗಂಡ ಹಣ ನೀಡಿದವರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮುಗಂಡ ಹಣ ಪಾವತಿಸಲು ಕೆಲ ಮಹಿಳೆಯರು ಬಂಗಾರ ಮಾರಿಕೊಂಡಿರುವ ನಿದರ್ಶನಗಳಿವೆ. ಹಲವರು ಖಾಸಗಿಯವರಿಂದ ಸಾಲ ಪಡೆದಿದ್ದಾರೆ. ಮಾಡಿದ ಸಾಲಕ್ಕೆ ಬಡ್ಡಿ ಪಾವತಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ದೂರಿದರು.
ಕೆಲ ಫಲಾನುಭವಿಗಳು ನಮಗೆ ಆಶ್ರಯ ಮನೆಯೇ ಬೇಡೆ. ನಮ್ಮ ಹಣವನ್ನು ಮರಳಿಸಿ ಎಂದು ಒತ್ತಾಯಿಸುತ್ತಿದ್ದಾರೆ, ಹಣ ವಾಪಾಸ್ಸು ಕೇಳುತ್ತಿದ್ದಾರೆ. ದಯವಿಟ್ಟು ಯಾರೂ ಹಣ ಹಿಂದಕ್ಕೆ ಪಡೆಯಬಾರದು. ಫಲಾನುಭವಿಗಳ ಪರವಾಗಿ ಹೋರಾಟ ಮಾಡಲು ರಾಷ್ಟ್ರಭಕ್ತರ ಬಳಗವಿದೆ. ಫಲಾನುಭವಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಧೈರ್ಯ ತುಂಬಿದರು.
ಆಶ್ರಯ ಬಡಾವಣೆಯಲ್ಲಿ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಈಗಾಗಲೇ ಮುಂಗಡ ನೀಡಿರುವವರಿಗೆ ಬ್ಯಾಂಕ್‌ನಿಂದ ಸಾಲ ಒದಗಿಸಬೇಕು. ಆಶ್ರಯ ಬಡಾವಣೆಗೆ ಬಸ್ ಮತ್ತಿತರ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಆರಂಭವಾದ ಪ್ರತಿಭಟನಾ ಜಾಥಾ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ ಮೂಲಕ ಸೀನಪ್ಪ ಶೆಟ್ಟಿ ವೃತ್ತ ತಲುಪಿತು. ಅಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಮಳೆಯನ್ನೂ ಲೆಕ್ಕಿಸದೇ ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಇ.ಕಾಂತೇಶ್, ಮಾಜಿ ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಮಾಜಿ ಉಪಮೇಯರ್ ಕೆ.ಶಂಕರ್, ಮಾಜಿ ಸದಸ್ಯ ಇ.ವಿಶ್ವಾಸ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಪ್ರಮುಖರಾದ ಬಾಲು, ಕಾಚಿನಕಟ್ಟೆ ಸತ್ಯನಾರಾಯಣ, ಮೋಹನ್ ಜಾದವ್, ನಾಗರಾಜ್, ವಾಗೀಶ್, ಶ್ರೀಕಾಂತ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.