ತೆಂಗು ಬೆಳೆ ಉಳಿಸಲು ಹೋರಾಟಕ್ಕೆ ಸಿದ್ಧ

ಪೋಟೋ 18- 03
ಜಾಜೂರು ಗ್ರಾಮದಲ್ಲಿ ತೋಟಗಾರಿಕಾ ಇಲಾಖೆಯಿಂದ ತೆಂಗಿನ ಮರಗಳಿಗೆ ತಗುಲಿರುವ ರೋಗಗಳ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಔಷಧವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿತರಿಸಿದರು. ಯೋಗೀಶ್, ಸೀಮಾ, ಶಿವಕುಮಾರ್, ಡಾ.ಜಗದೀಶ್, ಡಾ.ನಾಗರಾಜ್ ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ತೆಂಗಿನ ಮರಗಳು ರೋಗಬಾಧೆಗೆ ತುತ್ತಾಲಿದ್ದು, ಸಂಕಷ್ಟದಲ್ಲಿರುವ ರೈತರೆ ಎದ್ದೇಳಿ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಆಂದೋಲನವನ್ನೇ ಮಾಡೋಣ. ಇಲ್ಲದಿದ್ದರೆ ನಮ್ಮ ವಾಣಿಜ್ಯ ಬೆಳೆಯೇ ಇಲ್ಲದಂತ್ತಾಗುತ್ತದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಸಿದರು.

ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮದಲ್ಲಿ ಇತ್ತೀಚೆಗೆ ತೋಟಗಾರಿಕೆ ಇಲಾಖೆಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ಆಯೋಜಿಸಿದ್ದ ತೆಂಗು ಬೆಳೆಗಾರರಿಗೆ ತಾಂತ್ರಿಕ ಕಾರ್ಯಾಗಾರ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯ ಸವಲತ್ತುಗಳ ಕಾರ್ಯಾದೇಶ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೆಂಗಿನ ಕಾಯಿ, ಕೊಬ್ಬರಿ ಸೇರಿದಂತೆ ಎಳನೀರು ದರ ಹೆಚ್ಚಿ ತೆಂಗು ಬೆಳೆಗಾರ ಮುಖದಲ್ಲಿ ಸಂತಸ ಕಾಣುವ ಹಂತದಲ್ಲೇ ತೆಂಗಿನ ಮರಗಳಿಗೆ ಕಾಂಡ ಸೋರುವ ರೋಗ, ಕಪ್ಪುಹುಳು ರೋಗ, ಬಿಳಿನೊಣ ರೋಗ, ಅಣಬೆ ರೋಗ ಸೇರಿದಂತೆ ಸುಳಿಕೊಳೆ ರೋಗಗಳು ಕಂಡು ಬಂದಿದ್ದು, ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ತೆಂಗು ಬೆಳೆಗಾರರು ಇದ್ದಾರೆ. ಆದರೆ ರೋಗಗಳ ಉಲ್ಬಣದಿಂದ ತೆಂಗು ನಾಶವಾಗುತ್ತಿದೆ. ಇದನ್ನ ಉಳಿಸುವಲ್ಲಿ ಸರ್ಕಾರ ಮುಂದಾಗಬೇಕಿದೆ. ಅಲ್ಲದೆ ಪರಿಹಾರ ನೀಡುವ ಅಗತ್ಯವಿದೆ ಎಂದರು.

ಕೇಂದ್ರ ಸಹಕಾರವಿಲ್ಲ: ರಾಜ್ಯಾದ್ಯಂತ ತೆಂಗಿಗೆ ರೋಗಬಾಧೆೆ ಹೆಚ್ಚಿದ್ದರೂ ಸಹ ಕೇಂದ್ರದ ಕೊಕನೆಟ್ ಬೋರ್ಡ್ ಈ ಬಗ್ಗೆ ಗಮಹರಿಸಿಲ್ಲ, ಅಲ್ಲದೆ ಇದುವರೆವಿಗೂ ರೋಗ ನಿಯಂತ್ರಣಕ್ಕೆ ಮುಂದಾಗದೆ ಇರುವುದು ಸರಿಯಲ್ಲ. ಕೇಂದ್ರವು ಕೂಡಲೇ 500 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿ ರೈತರ ನೆರವಿಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ಹೋರಾಟಕ್ಕೂ ಸಿದ್ಧ್ದ: ತೆಂಗು ರೋಗಗಳ ನಿವಾರಣೆಗೆ ಯೋಜನೆ ರೂಪಿಸಿ, ಔಷಧ ಸಿಂಪಡಣೆಗೆ ಸರ್ಕಾರ ಮುಂದಾಗಬೇಕು. ವಿಜ್ಞಾನಿಗಳ ತಂಡ ರಚಿಸಿ ಕೀಟಗಳ ಪೂರ್ಣ ನಾಶಕ್ಕೆ ಯೋಜನೆ ರೂಪಿಸಬೇಕು. ಇಲ್ಲದಿದ್ದರೇ ತೆಂಗು ಬೆಳೆ ಸರ್ವನಾಶವಾಗಲಿದೆ. ಇದರ ಶಾಶ್ವತ ಪರಿಹಾರಕ್ಕಾಗಿ ನಾನು ರೈತರೊಡನೆ ಹೋರಾಟಕ್ಕೂ ಸಿದ್ಧ್ದನಿದ್ದೇನೆ ಎಂದು ಹೇಳಿದರು.

ಆಂದೋಲನ ಮಾಡೋಣ: ತೆಂಗು ಉಳಿವಿಗಾಗಿ ರೈತರೆಲ್ಲರೂ ಮೊದಲು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ, ಕೀಟಗಳ ನಾಶ ಮಾಡುವ ಪಣ ತೊಟ್ಟು ದೊಡ್ಡ ಮಟ್ಟದ ಆಂದೋಲನ ಮಾಡೋಣ. ಇಲ್ಲದಿದ್ದರೆ ತೆಂಗು ನಾಶವಾಗಿ ಎಲ್ಲರೂ ವಾಣಿಜ್ಯ ಬೆಳೆಯನ್ನೇ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಲಿದ್ದೀರಿ ಎಂದು ಹೇಳಿದರು.

ವಿಜ್ಞಾನಿ ಡಾ. ನಾಗೇಂದ್ರ ಮಾತನಾಡಿದರು. ಹಾಸನ ತೋಟಗಾರಿಕಾ ಉಪ ನಿದೇಶಕ ಕೆ.ಎಸ್.ಯೋಗೀಶ್, ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕಿ ಸೀಮಾ, ಶಿವಕುಮಾರ್, ವಿಜ್ಞಾನಿಗಳಾದ ಡಾ.ಜಗದೀಶ್, ಡಾ.ನಾಗರಾಜ್, ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಕಾಟೀಕೆರೆ ಉಮೇಶ್, ಸಂಕೋಡನಹಳ್ಳಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net