

ಧಾರವಾಡ: ನನ್ನನ್ನು ಅಯೋಗ್ಯ, ಗೂಂಡಾ ಎಂದವರು ಫೆ. 23ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ನಡೆಯುವ ಸತ್ಯದರ್ಶನ ಸಭೆಯಲ್ಲಿ ಆರೋಪ ಸಾಬೀತು ಮಾಡಿದರೆ ಕರ್ತೃಗದ್ದುಗೆ ಎದುರೇ ಪ್ರಾಣತ್ಯಾಗ ಮಾಡಲು ಸಿದ್ಧ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದ್ಗುರು ಹಾಗೂ ನನ್ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮಿಬ್ಬರ ಸಂಬಂಧ ಹಾಳು ಮಾಡುವ ಕೆಲವರ ಯತ್ನದಿಂದ ಸಮಸ್ಯೆ ಉದ್ಭವ ವಾಗಿದೆ. ಮಠದಿಂದ ರಾಜಕೀಯ ದೂರವಾಗಬೇಕು. ರಾಜಕಾರಣ ಮಾಡುತ್ತಿರುವವರ ಹೆಸರುಗಳನ್ನು 23ರ ಸಭೆಯಲ್ಲಿ ಬಹಿರಂಗಪಡಿಸುತ್ತೇನೆ. ಮೂರುಸಾವಿರ ಮಠದ ಪೀಠಾಧಿಪತಿಯಾಗಲು 1.25 ಕೋಟಿ ರೂ. ಕೊಟ್ಟಿದ್ದೇನೆ ಎಂದು ಕೆಲವರು ನನ್ನ ತೇಜೋವಧೆ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ.
ಅದೆಲ್ಲದರ ಬಗ್ಗೆ ಫೆ. 23ರಂದು ಆಯೋಜನೆಗೊಂಡಿರುವ ಸಭೆಯಲ್ಲಿ ಸತ್ಯದರ್ಶನ ಮಾಡಿಸುತ್ತೇನೆ. ತಾವು ಮೂರು ಸಾವಿರ ಮಠದ ಪೀಠಾಧಿಪತಿ ಆಗಬೇಕು ಎಂದು ಆಸೆ ಪಟ್ಟಿಲ್ಲ. ಇದಕ್ಕೆ ರ್ತಾಕ ಅಂತ್ಯ ಕಾಣಿಸಲು ಯಾವ ತ್ಯಾಗಕ್ಕೂ ಸಿದ್ಧ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿಯವರು 2006ರಲ್ಲಿ ಕರೆ ಮಾಡಿ ತಮಗೆ ಯಾರೂ ಗತಿ ಇಲ್ಲ, ತೊಂದರೆಯಲ್ಲಿದ್ದು, ರಕ್ಷಣೆ ಬೆಂಬಲ ನೀಡಬೇಕು ಎಂದು ಸಹಾಯ ಕೋರಿದ್ದರು. 3 ವರ್ಷ ಕಾಲ ಬಾಲೇಹೊಸೂರ ಮಠದ ಖರ್ಚಿನಲ್ಲಿ ಹುಬ್ಬಳ್ಳಿ ಮಠದ ಕಾನೂನು ಹೋರಾಟಕ್ಕೆ ಸ್ಪಂದಿಸಿದೆ. 2009ರಲ್ಲಿ ಹಣಕಾಸಿನ ತೊಂದರೆ ಬಂತು. ನ್ಯಾಯನಿರ್ಣಯಕ್ಕೆ 1.25 ಕೋಟಿ ರೂ. ಖರ್ಚಾಗಿತ್ತು. ಪೀಠಾಧಿಪತಿಯಾಗಲೆಂದೇ ಹಣ ನೀಡಿದ್ದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ. ಅದಕ್ಕೆಲ್ಲ 23ರ ಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದರು.