ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಿದ್ಧ: ಸಿದ್ದರಾಮಯ್ಯ

cm siddaramaiah
ಸಿಎಂ ಸಿದ್ದರಾಮಯ್ಯ
Published on

ಮೈಸೂರು: ಲೋಕಸಭೆ ಚುನಾವಣೆ ಫಲಿತಾಂಶ ಬಂದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಚುನಾವಣೆ ಮಾಡಲಾಗುವುದು. ಅದಕ್ಕಾಗಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.


ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಹೋಗಲಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಡ್ವೊಕೇಟ್ ಜನರಲ್ ಜತೆಗೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಕ್ಷೇತ್ರ ಮರುವಿಂಗಡಣೆಯಾದ ಮೇಲೆ ಮೀಸಲಾತಿ ನಿಗದಿ ಮಾಡಲೇಬೇಕು ಎಂದರು.

ಯತೀಂದ್ರಗೆ ಎಂಎಲ್‌ಸಿ ಟಿಕೆಟ್ ಹೈಕಮಾಂಡ್‌ಗೆ ಬಿಟ್ಟದ್ದು; ಹೈಕಮಾಂಡ್ ಏನು ಮಾಡುವುದೋ ಗೊತ್ತಿಲ್ಲ


ನಾನು ಕೋಲಾರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ. ಹೈಕಮಾಂಡ್ ಕೋಲಾರ ಬೇಡ, ವರುಣದಿಂದ ಸ್ಪರ್ಧೆ ಮಾಡಿ ಎಂದು ಹೇಳಿತು. ಆಗ ಡಾ.ಯತೀಂದ್ರ ಹಾಲಿ ಎಂಎಲ್‌ಎ ಆಗಿದ್ದರು.

ಆಗ ಹೈಕಮಾಂಡ್ ಸೀಟ್ ಬಿಟ್ಟುಕೊಡಿ. ಮುಂದೆ ನಿಮ್ಮನ್ನು ಎಂಎಲ್‌ಸಿ ಮಾಡುತ್ತೇವೆಂಬ ಯತೀಂದ್ರಗೆ ಭರವಸೆ ನೀಡಿತ್ತು. ಈಗ ಏನು ಮಾಡುತ್ತದೆಯೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


ಕೆಲವು ಕಡೆ ಕೈಗಾರಿಕೆಗಳಿಂದ ಬಿಡುವ ತ್ಯಾಜ್ಯ ನೀರಿನಿಂದ ಕಾವೇರಿ ನದಿ ಮಲಿನವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net